ಆಮ್ ಆದ್ಮಿ ಪಾರ್ಟಿ (AAP) ತೊರೆದು ಭಾರತೀಯ ಜನತಾ ಪಾರ್ಟಿ (BJP) ಸೇರಿರುವ ಸಂಸದ ರಾಘವ್ ಚಡ್ಡಾ ಅವರ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ರಾಜಕೀಯ ಬೆಳವಣಿಗೆಯ ಬಿಸಿ ಈಗ ಅವರ ಪತ್ನಿ, ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರಿಗೂ ತಟ್ಟಿದೆ. ರಾಘವ್ ಚಡ್ಡಾ ಅವರ ಪಕ್ಷಾಂತರದ ಬೆನ್ನಲ್ಲೇ ಪರಿಣಿತಿ ಚೋಪ್ರಾ ತಮ್ಮ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಕಳೆದುಕೊಳ್ಳುತ್ತಿದ್ದಾರೆ.
ಘಟನೆಯ ವಿವರ: ಶನಿವಾರ ಪರಿಣಿತಿ ಚೋಪ್ರಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಷಕರಿಗೆ ಸಂಬಂಧಿಸಿದ ಆ್ಯಪ್ ಒಂದರ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. ಈ ಪೋಸ್ಟ್‌ಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿರಲಿಲ್ಲ. ಆದರೂ ನೆಟ್ಟಿಗರು ರಾಘವ್ ಚಡ್ಡಾ ಅವರ ರಾಜಕೀಯ ನಿರ್ಧಾರವನ್ನು ಮುಂದಿಟ್ಟುಕೊಂಡು ಪರಿಣಿತಿ ಅವರನ್ನು ಟೀಕಿಸಲು ಶುರು ಮಾಡಿದ್ದಾರೆ.
ನೆಟ್ಟಿಗರ ಆಕ್ರೋಶ: ಪರಿಣಿತಿ ಅವರ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಹಲವು ಬಳಕೆದಾರರು ‘ಅನ್‌ಫಾಲೋ’ (Unfollow) ಎಂದು ಬರೆಯುತ್ತಿದ್ದಾರೆ. ಇನ್ನು ಕೆಲವರು ‘ಡರ್ಪೋಕ್’ (ಹೇಡಿ) ಎಂದು ಕರೆದರೆ, ಮತ್ತೂ ಕೆಲವರು ‘ನಿಮ್ಮ ಪತಿ ಅದ್ಭುತವಾಗಿ ನಟಿಸಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ. “ನಿಮ್ಮಿಬ್ಬರನ್ನೂ ದ್ವೇಷಿಸುತ್ತೇವೆ” ಎಂಬಂತಹ ಕಟು ಮಾತುಗಳು ಕಮೆಂಟ್ ಬಾಕ್ಸ್‌ನಲ್ಲಿ ಕಂಡುಬರುತ್ತಿವೆ.
ಫಾಲೋವರ್ಸ್ ಸಂಖ್ಯೆಯಲ್ಲಿ ಇಳಿಕೆ: ಸಾಮಾಜಿಕ ಜಾಲತಾಣಗಳ ಅಂಕಿಅಂಶಗಳ ಪ್ರಕಾರ, ರಾಘವ್ ಚಡ್ಡಾ ಬಿಜೆಪಿ ಸೇರಿದ ಒಂದೇ ದಿನದಲ್ಲಿ ಪರಿಣಿತಿ ಚೋಪ್ರಾ ಅವರು ಸುಮಾರು ೪,೬೦೦ಕ್ಕೂ ಹೆಚ್ಚು ಫಾಲೋವರ್ಸ್ ಕಳೆದುಕೊಂಡಿದ್ದಾರೆ. ಇತ್ತ ರಾಘವ್ ಚಡ್ಡಾ ಅವರು ಬರೋಬ್ಬರಿ ೧೦ ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಕಳೆದುಕೊಂಡಿರುವುದು ವರದಿಯಾಗಿದೆ. ವಿಶೇಷವಾಗಿ ಯುವ ಮತದಾರರು ಮತ್ತು ‘ಜೆನ್ ಜಿ’ (Gen Z) ಸಮುದಾಯದವರು ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ರಾಜಕೀಯದ ಬಗ್ಗೆ ಪರಿಣಿತಿ: ಹಿಂದಿನ ಸಂದರ್ಶನವೊಂದರಲ್ಲಿ ಪರಿಣಿತಿ ಚೋಪ್ರಾ ಅವರು ತಮಗೆ ರಾಜಕೀಯದ ಬಗ್ಗೆ ಅಷ್ಟಾಗಿ ಅರಿವಿಲ್ಲ ಎಂದು ಹೇಳಿಕೊಂಡಿದ್ದರು. ಮನೆಯಲ್ಲಿ ತಾವು ರಾಜಕೀಯ ಅಥವಾ ಸಿನಿಮಾಗಳ ಬಗ್ಗೆ ಚರ್ಚಿಸುವುದಿಲ್ಲ ಎಂದು ಅವರು ತಿಳಿಸಿದ್ದರು. ಆದರೂ ಪತಿಯ ರಾಜಕೀಯ ನಿರ್ಧಾರಕ್ಕೆ ಪತ್ನಿ ಹೊಣೆ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.

