ಪುಣೆ: ಭಾರತೀಯ ವಾಯುಸೇನೆಯ ಯುದ್ಧ ವಿಮಾನವೊಂದು ಮಹಾರಾಷ್ಟ್ರದ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ.
ತಾಂತ್ರಿಕ ದೋಷದಿಂದ ಯುದ್ಧ ವಿಮಾನವೊಂದು ಪುಣೆ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು, ರನ್ವೇ ಸ್ಥಗಿತಗೊಂಡಿತ್ತು. ಈ ಘಟನೆಯಿಂದ ನೂರಾರು ವಿಮಾನಗಳ ಹಾರಾಟ ರದ್ದುಗೊಂಡು ತೀವ್ರ ಸಂಚಾರ ವ್ಯತ್ಯಯ ಉಂಟಾಯಿತು.
ಶುಕ್ರವಾರ ರಾತ್ರಿ ಸುಮಾರು 10:25ರ ಸುಮಾರಿಗೆ ವಾಯುಪಡೆಯ ಯುದ್ಧ ವಿಮಾನವೊಂದು ವಾಡಿಕೆಯ ತರಬೇತಿ ಹಾರಾಟದ ನಂತರ ಭೂಸ್ಪರ್ಶ ಮಾಡುವಾಗ ಈ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನದ ಅಡಿಭಾಗದ ಚಕ್ರಗಳ ವ್ಯವಸ್ಥೆಯಲ್ಲಿ ತಾಂತ್ರಿಕ ವೈಫಲ್ಯ ಉಂಟಾದ ಪರಿಣಾಮ ಅದು ರನ್ವೇ ಮೇಲೆಯೇ ನಿಂತುಬಿಟ್ಟಿತ್ತು. ಅದೃಷ್ಟವಶಾತ್ ವಿಮಾನದಲ್ಲಿದ್ದ ಪೈಲಟ್ಗಳು ಸುರಕ್ಷಿತವಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ವಾಯುಪಡೆ ಸ್ಪಷ್ಟಪಡಿಸಿದೆ.
ವಿಮಾನದಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಯಾವುದೇ ಹಾನಿಯಾಗಿಲ್ಲ. ವಿಮಾನಯಾನವನ್ನು ಪುನಃ ಕಾರ್ಯಾಚರಣೆಗೆ ತರುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿ, ಅಗತ್ಯ ಭದ್ರತಾ ಪರಿಶೀಲನೆಗಳ ನಂತರ ರನ್ವೇ ಮತ್ತೆ ಕಾರ್ಯಾಚರಣೆಗೆ ಸಿದ್ಧವಾಗಿದೆ ಎಂದು ಘೋಷಿಸಲಾಗಿದೆ.
ಪುಣೆ ವಿಮಾನ ನಿಲ್ದಾಣದಲ್ಲಿ ಲೋಹಗಾಂವ್ ವಾಯುಪಡೆ ಕೇಂದ್ರದೊಂದಿಗೆ ನಾಗರಿಕ ವಿಮಾನಗಳೂ ಕಾರ್ಯನಿರ್ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿದ ತಕ್ಷಣ ಸುರಕ್ಷತಾ ಕ್ರಮವಾಗಿ ಎಲ್ಲಾ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ರನ್ವೇ ಕ್ಲಿಯರ್ ಮಾಡಲು 4 ರಿಂದ 6 ಗಂಟೆಗಳ ಕಾಲ ಹಿಡಿಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

