ನವದೆಹಲಿ : ವಿಶ್ವದಾದ್ಯಂತ ತಾಂತ್ರಿಕ ವಲಯದಲ್ಲಿ ಉದ್ಯೋಗ ಕಡಿತದ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯುತ್ತಿದೆ. ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಜಾಗತಿಕವಾಗಿ ಸುಮಾರು 80 ಸಾವಿರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನ ಇತ್ತೀಚಿನ ವರದಿ ಬಹಿರಂಗಪಡಿಸಿದೆ.
ಹೌದು. ಜಾಗತಿಕ ತಾಂತ್ರಿಕ ವಲಯದಲ್ಲಿ ಲೇ-ಆಫ್‌ಗಳ ಸುನಾಮಿ ಮುಂದುವರಿದಿದ್ದು, 2026ರ ಮೊದಲ ಮೂರು ತಿಂಗಳಲ್ಲೇ ಬರೋಬ್ಬರಿ 80,000 ಉದ್ಯೋಗಿಗಳು ಬೀದಿಗೆ ಬಿದ್ದಿದ್ದಾರೆ. ಕೋವಿಡ್ ಬಿಕ್ಕಟ್ಟಿನ ನಂತರ ಕಂಡುಬಂದ ಅತಿದೊಡ್ಡ ಉದ್ಯೋಗ ಕಡಿತ ಇದಾಗಿದ್ದು, ಕೃತಕ ಬುದ್ಧಿಮತ್ತೆ (AI) ಮತ್ತು ಆಟೊಮೇಷನ್‌ನತ್ತ ಕಂಪನಿಗಳು ಹೊರಳುತ್ತಿರುವುದು ಈ ಆತಂಕಕಾರಿ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಒರಾಕಲ್ ಮತ್ತು ಅಮೆಜಾನ್‌ನಂತಹ ದೈತ್ಯ ಸಂಸ್ಥೆಗಳೇ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದು, ತಾಂತ್ರಿಕ ಜಗತ್ತಿನಲ್ಲಿ ಮಾನವ ಸಂಪನ್ಮೂಲಕ್ಕಿಂತ ಯಂತ್ರಗಳ ದಕ್ಷತೆಗೆ ಹೆಚ್ಚಿನ ಆದ್ಯತೆ ಸಿಗುತ್ತಿರುವುದು ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ. ಮಾಸಿಕ ವರದಿಯ ಪ್ರಕಾರ, ಈ ಉದ್ಯೋಗ ನಷ್ಟದ ಕರಾಳ ಛಾಯೆ ಅಮೆರಿಕದಲ್ಲಿ ಅತಿ ಹೆಚ್ಚಾಗಿದ್ದರೂ, ಭಾರತದ ಟೆಕ್ಕಿಗಳಿಗೂ ಇದರ ಬಿಸಿ ತಟ್ಟಿದೆ.
ಕೋವಿಡ್ ಬಿಕ್ಕಟ್ಟಿನ ನಂತರದ ಅತಿದೊಡ್ಡ ಉದ್ಯೋಗ ಕಡಿತ ಇದಾಗಿದೆ ಎಂದು ವರದಿ ಉಲ್ಲೇಖಿಸಿದೆ. 2021 ರಿಂದ ಇದುವರೆಗೆ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಟೆಕ್ಕಿಗಳು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಎಐ (AI – ಕೃತಕ ಬುದ್ಧಿಮತ್ತೆ) ಸಂಬಂಧಿತ ಪುನರ್ರಚನೆ, ಆಟೊಮೇಷನ್‌ಗೆ ಸಂಪನ್ಮೂಲಗಳ ವರ್ಗಾವಣೆ, ಮೂಲಸೌಕರ್ಯ ಮತ್ತು ದಕ್ಷತೆ ಹೆಚ್ಚಿಸಲು ಕಂಪನಿಗಳು ಹೆಚ್ಚಿನ ಹಣ ವ್ಯಯಿಸುತ್ತಿರುವುದು ಈ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣ ಎಂದು ವರದಿ ತಿಳಿಸಿದೆ.
ವರದಿಯ ಪ್ರಮುಖ ಅಂಶಗಳು:
- ಯಾವ ವಲಯಗಳಲ್ಲಿ ಹೆಚ್ಚು ಕಡಿತ? : ಕ್ಲೌಡ್ ಕಂಪ್ಯೂಟಿಂಗ್, ಸಾಫ್ಟ್‌ವೇರ್ ಮತ್ತು ಸಾಫ್ಟ್‌ವೇರ್-ಆಸ್-ಎ-ಸರ್ವೀಸ್ (SaaS) ಕಂಪನಿಗಳಲ್ಲಿ ಉದ್ಯೋಗ ಕಡಿತದ ಪ್ರಮಾಣ ಹೆಚ್ಚಿದೆ.
- ಅಮೆರಿಕಾದಲ್ಲಿ ಅತಿ ಹೆಚ್ಚು: ಜಾಗತಿಕವಾಗಿ ನಡೆದಿರುವ ಒಟ್ಟು ಉದ್ಯೋಗ ಕಡಿತದಲ್ಲಿ ಅಮೆರಿಕವೊಂದರಲ್ಲೇ ಶೇ. 77 ರಷ್ಟು ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ.
- ಭಾರತದ ಪರಿಸ್ಥಿತಿ: ಭಾರತದಲ್ಲಿ ಸುಮಾರು 2 ಸಾವಿರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.
- ಪ್ರಮುಖ ಕಂಪನಿಗಳು: ಕಂಪನಿಗಳ ಮಟ್ಟದಲ್ಲಿ ನೋಡುವುದಾದರೆ, ಒರಾಕಲ್ (Oracle) 26,000, ಅಮೆಜಾನ್ (Amazon) 16,000 ಮತ್ತು ಮೆಟಾ (Meta) 2,400 ಉದ್ಯೋಗಿಗಳನ್ನು ವಜಾಗೊಳಿಸಿವೆ.
ವೆಚ್ಚ ಕಡಿತಕ್ಕಾಗಿ ಈ ಕ್ರಮ! ಕಾರ್ಮಿಕ ಶಕ್ತಿಯ ನಿರ್ಧಾರಗಳ ಮೇಲೆ ಕೃತಕ ಬುದ್ಧಿಮತ್ತೆ (AI) ಹೆಚ್ಚಿನ ಪ್ರಭಾವ ಬೀರುತ್ತಿದೆ ಎಂದು ವರದಿ ಹೇಳಿದೆ. ಆದರೆ, ಈ ಉದ್ಯೋಗ ಕಡಿತಗಳಲ್ಲಿ ಹೆಚ್ಚಿನವು ಕೇವಲ ಆಟೊಮೇಷನ್‌ನಿಂದ ಮಾತ್ರವಲ್ಲದೆ, ಮುನ್ನೆಚ್ಚರಿಕೆ ಕ್ರಮವಾಗಿ ವೆಚ್ಚವನ್ನು ಕಡಿಮೆ ಮಾಡಲು ಕಂಪನಿಗಳು ಕೈಗೊಂಡ ನಿರ್ಧಾರಗಳಂತೆ ಕಾಣಿಸುತ್ತಿವೆ ಎಂದು ವಿಶ್ಲೇಷಿಸಲಾಗಿದೆ. ಎಐ ಎಂಬುದು ಕೇವಲ ಭವಿಷ್ಯದ ಹೂಡಿಕೆಯಲ್ಲ, ಅದು ಸಾಂಸ್ಥಿಕ ಪುನರ್ರಚನೆ ಮತ್ತು ಮಾನವ ಸಂಪನ್ಮೂಲ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಪ್ರೇರಕ ಶಕ್ತಿಯಾಗಿ ಬದಲಾಗಿದೆ” ಎಂದು ವರದಿ ಅಭಿಪ್ರಾಯಪಟ್ಟಿದೆ.

