ದಾವಣಗೆರೆ: ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ದಾವಣಗೆರೆ ನಗರದ ಶಂಕರ ವಿಹಾರ ಪ್ರದೇಶದ ವ್ಯಕ್ತಿಯೊಬ್ಬರಿಗೆ ಆನ್ಲೈನ್ ಮೂಲಕ ಬರೋಬ್ಬರಿ ₹24.49 ಲಕ್ಷ ವಂಚನೆ ಮಾಡಲಾಗಿದೆ.
ಆಗಸ್ಟ್ 8ರಂದು ವಾಟ್ಸಾಪ್ ಮೂಲಕ ಬಂದ ಸಂದೇಶವನ್ನು ನಂಬಿದ ವ್ಯಕ್ತಿ ಆರಂಭದಲ್ಲಿ ₹4 ಲಕ್ಷ ಹೂಡಿಕೆ ಮಾಡಿದ್ದರು. ಬಳಿಕ ₹100 ವಿತ್ಡ್ರಾ ಮಾಡಿಕೊಂಡು ಹಣ ಹಿಂಪಡೆಯಲು ಸಾಧ್ಯವಾಗುತ್ತದೆಯೇ ಎಂದು ಪರಿಶೀಲಿಸಿದ್ದರು. ಹಣ ಹಿಂಪಡೆಯಲು ಸಾಧ್ಯವಾಗಿದ್ದರಿಂದ ಆನ್ಲೈನ್ ಹೂಡಿಕೆ ನಿಜವೆಂದು ನಂಬಿದ ಅವರು, ವಂಚಕರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾಯಿಸಿದ್ದಾರೆ.
ಮೊದಲಿಗೆ ತಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡಿದ್ದ ಅವರು, ನಂತರ ಚಿನ್ನಾಭರಣಗಳನ್ನು ಅಡಮಾನವಿಟ್ಟು ಹಣ ಪಡೆದಿದ್ದಾರೆ. ಅಲ್ಲದೆ ಸ್ನೇಹಿತರು ಹಾಗೂ ಸಂಬಂಧಿಕರಿಂದ ಸಾಲ ಪಡೆದು ವಂಚಕರ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ.
ವಂಚಕರು ಅವರ ಹೆಸರಿನಲ್ಲಿ ತೆರೆದಿದ್ದ ಆನ್ಲೈನ್ ಖಾತೆಯಲ್ಲಿ ₹99.19 ಲಕ್ಷ ಹಣ ಇರುವುದಾಗಿ ತೋರಿಸಲಾಗಿತ್ತು. ಆದರೆ ಆ ಹಣವನ್ನು ಹಿಂಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಾನು ವಂಚನೆಗೆ ಒಳಗಾಗಿರುವುದು ಅವರಿಗೆ ತಿಳಿದುಬಂದಿದೆ.
ಈ ಕುರಿತು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿರುವ ಅವರು, ವಂಚಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
* ಮೈಸೂರಿಗೆ ಅಭಿಮನ್ಯುವಿಗೆ ಅದ್ಧೂರಿ ಸ್ವಾಗತ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿರುವ ನಡುವೆಯೇ, ಕಳೆದ ವರ್ಷದವರೆಗೆ ಚಿನ್ನದ ಅಂಬಾರಿ ಹೊತ್ತಿದ್ದ ಆನೆ ಅಭಿಮನ್ಯು ಸೋಮವಾರ ಮೈಸೂರಿಗೆ ಆಗಮಿಸಿದೆ.
ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿಯಾಗಿರುವ ಅಭಿಮನ್ಯುವನ್ನು ಈ ಬಾರಿಯ ದಸರಾ ಮಹೋತ್ಸವದಲ್ಲಿ ನಿಶಾನೆ ಆನೆಯಾಗಿ ಆಯ್ಕೆ ಮಾಡಲಾಗಿದೆ. ಅಭಿಮನ್ಯುವಿಗೆ ದಸರಾ ವೇಳೆ ಸೂಕ್ತ ಬೀಳ್ಕೊಡುಗೆ ನೀಡಬೇಕು ಎಂದು ಆತನ ಅಭಿಮಾನಿಗಳು ಈ ಹಿಂದೆ ಒತ್ತಾಯಿಸಿದ್ದರು.
ಅಭಿಮಾನಿಗಳ ಬೇಡಿಕೆಯಂತೆ ಅಭಿಮನ್ಯು ಈ ಬಾರಿಯ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದಾನೆ. ಸೋಮವಾರ ಅರಮನೆ ಮಂಡಳಿ ವತಿಯಿಂದ ಅಭಿಮನ್ಯುವಿಗೆ ಸಾಂಪ್ರದಾಯಿಕವಾಗಿ ಅದ್ಧೂರಿ ಸ್ವಾಗತ ನೀಡಲಾಯಿತು. ಈ ವೇಳೆ ಅಭಿಮಾನಿಗಳು ಕೆಂಪು ಮತ್ತು ಚಿನ್ನದ ಬಣ್ಣದ ವಿಶೇಷ ಪೇಟವನ್ನು ಉಡುಗೊರೆಯಾಗಿ ನೀಡಿದರು.
ಈ ಪೇಟವು ನಾಲ್ವಡಿ ಕೃಷ್ಣರಾಜ ಒಡೆಯರ್ ಧರಿಸುತ್ತಿದ್ದ ಪೇಟದ ಮಾದರಿಯಲ್ಲಿ ತಯಾರಿಸಲಾಗಿದ್ದು, ಸುಮಾರು 6ರಿಂದ 8 ಕೆ.ಜಿ. ತೂಕ ಹೊಂದಿದೆ.
ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಡಾ. ಪ್ರಭುಗೌಡ ಮಾತನಾಡಿ, ಸರ್ಕಾರ ಅಭಿಮನ್ಯುವನ್ನು ನಿಶಾನೆ ಆನೆಯಾಗಿ ಆಯ್ಕೆ ಮಾಡಿದೆ. ಇಂದು ಪೂಜೆ ಸಲ್ಲಿಸುವ ಮೂಲಕ ಆನೆಗೆ ಸ್ವಾಗತ ನೀಡಲಾಗಿದೆ. ಅಭಿಮನ್ಯುವಿಗೆ ವಿಶೇಷ ತರಬೇತಿಯ ಅಗತ್ಯವಿಲ್ಲ. ಆತ ಶಬ್ದಗಳಿಗೆ ಈಗಾಗಲೇ ಒಗ್ಗಿಕೊಂಡಿದ್ದಾನೆ. ಮಂಗಳವಾರದಿಂದ ಅಭಿಮನ್ಯು ತರಬೇತಿಯಲ್ಲಿ ಭಾಗವಹಿಸಲಿದ್ದಾನೆ ಎಂದು ತಿಳಿಸಿದರು.
ಅಕ್ಟೋಬರ್ 7, 9 ಮತ್ತು 12ರಂದು ಫಿರಂಗಿ ಸಿಡಿಸುವ ತರಬೇತಿ ನೀಡಲಾಗುವುದು. ಸಾರ್ವಜನಿಕರು ಆನೆಗಳಿಂದ ಅಂತರ ಕಾಯ್ದುಕೊಂಡು ವೀಕ್ಷಿಸಬೇಕು. ಯಾವುದೇ ಕಾರಣಕ್ಕೂ ಆನೆಗಳ ಸಮೀಪ ಹೋಗಬಾರದು ಎಂದು ಅವರು ಮನವಿ ಮಾಡಿದರು.
ಚಾಮರಾಜ ಕ್ಷೇತ್ರದ ಶಾಸಕ ವಿ. ಶ್ರೀವತ್ಸ ಮಾತನಾಡಿ, “ಅಭಿಮನ್ಯು ಇಲ್ಲದೆ ದಸರಾ ಇಲ್ಲ ಎಂಬಂತಾಗಿದೆ. ಕೊನೆಗೂ ಆತ ದಸರಾಕ್ಕೆ ಬಂದಿದ್ದಾನೆ. ಅಭಿಮನ್ಯುವನ್ನು ನಿಶಾನೆ ಆನೆಯಾಗಿ ಆಯ್ಕೆ ಮಾಡಿರುವ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ನಾನೂ ಪೂಜೆಯಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ” ಎಂದು ಹೇಳಿದರು.

