ಬೆಂಗಳೂರು: ರಾಜ್ಯದ ವಿವಿಧೆಡೆ ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡಲು 90 ಸಿವಿಲ್ ನ್ಯಾಯಾಧೀಶರ ನೇರ ನೇಮಕಾತಿಗೆ ಹೈಕೋರ್ಟ್ ಗುರುವಾರ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ನ್ಯಾಯಾಂಗ ಸೇವಾ ನೇಮಕಾತಿ ನಿಯಮ 2004 ಮತ್ತು ನಂತರ ಕಾಲಕಾಲಕ್ಕೆ ಆಗಿರುವ ತಿದ್ದುಪಡಿ ಅನುಸಾರ 15 ಹೊಸ, 75 ಬ್ಯಾಕ್ ಲಾಗ್ ಸೇರಿ 90 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮೇ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಈ ನೇಮಕಾತಿ ಹೈಕೋರ್ಟ್ ನಲ್ಲಿ ಬಾಕಿ ಇರುವ ಅರ್ಜಿಯ ಅಂತಿಮ ತೀರ್ಮಾನಕ್ಕೆ ಒಳಪಡುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ, ಸಂದರ್ಶನದ ಅಂಕಗಳನ್ನು ಆಧರಿಸಿ ನೇರ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. ಈ ಕುರಿತಾದ ವಿವರಗಳಿಗಾಗಿ ಹೈಕೋರ್ಟ್ ವೆಬ್ಸೈಟ್ ಅಥವಾ ರಾಜ್ಯ ಪತ್ರವನ್ನು ಗಮನಿಸಬಹುದಾಗಿದೆ.

