ಬೆಂಗಳೂರು: ಮುಸ್ಲಿಂ ಕುಟುಂಬದ ಜತೆ ಗಲಾಟೆ ಪ್ರಕರಣದಲ್ಲಿ ಬಿಜೆಪಿ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಪುತ್ರ ಅಶುತೋಷ್ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.
ಎಫ್ಐಆರ್ ಮತ್ತು ಆರೋಪ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದೆ ಇರುವುದರಿಂದ ಪ್ರಕರಣದಿಂದ ಕೈಬಿಡುವಂತೆ ಕೋರಿ ಅಶುತೋಷ್ ಹೆಗಡೆ ಸಲ್ಲಿಸಿದ ಮಧ್ಯಂತರ ಅರ್ಜಿ ಬಗ್ಗೆ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ.
ನಾಲ್ಕನೇ ಆರೋಪಿ ಅಶುತೋಷ್ ವಿರುದ್ಧ ಮೇಲ್ನೋಟಕ್ಕೆ ಅಪರಾಧವಾಗುವಂತಹ ಆರೋಪಗಳಿಲ್ಲ. ಮುಂದಿನ ವಿಚಾರಣೆಗೆ ಒಳಪಟ್ಟು ಮುಂದಿನ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ನಾಲ್ಕನೇ ಆರೋಪಿಗೆ ಮಾತ್ರ ಮಧ್ಯಂತರ ಆದೇಶ ಸೀಮಿತವಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ತುಮಕೂರಿನಲ್ಲಿ ಮದುವೆಗೆ ಹೋಗಿ ಮುಸ್ಲಿಂ ಸಮುದಾಯದ 7 ಮಂದಿ ಇನೋವಾ ಕಾರಿನಲ್ಲಿ ಹಳೆ ನಿಜಗಲ್ ಬಳಿ ಬರುತ್ತಿದ್ದಾಗ ಹಿಂದಿನಿಂದ ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಬಂದ ಕಾರಿನ ಚಾಲಕ ತಮ್ಮ ಕಾರನ್ನು ನಿಲ್ಲಿಸುವಂತೆ ಹೇಳಿದರು. ಕಾರು ನಿಲುಗಡೆ ಮಾಡುತ್ತಿದ್ದಂತೆ ಮುಖಕ್ಕೆ ಗುದ್ದದ್ದರು. ಮತ್ತೊಬ್ಬ ವ್ಯಕ್ತಿ ನಮ್ಮನ್ನು ಕಾರಿನಿಂದ ಹೊರಗೆ ಎಳೆದು ಹಲ್ಲೆ ನಡೆಸಿದರು. ಇದರಿಂದ ಕಾರಿನಲ್ಲಿದ್ದ ಸಲ್ಮಾನ್ ಖಾನ್ ಮೂರು ಹಲ್ಲುಗಳು ಮುರಿದಿವೆ ಎಂದು ಗಾಯಾಳು ಹಾಲೇನಹಳ್ಳಿಯ ಸೈಫ್ ಖಾನ್ ದೂರು ನೀಡಿದ್ದರು.
ಅನಂತ್ ಕುಮಾರ್ ಹೆಗಡೆ ಕಾರಿನಲ್ಲಿದ್ದರು. ಅವರು ಕರೆದ ತಕ್ಷಣವೇ ಉಳಿದವರು ಬಂದು ನಮ್ಮ ಮೇಲೆ ಹಲ್ಲೆ ಮಾಡಿದರು. ನಮ್ಮ ತಾಯಿಯ ಮೇಲೆ ಅನಂತ್ ಕುಮಾರ್ ಹಲ್ಲೆ ನಡೆಸಿದರು. ಭದ್ರತಾ ಸಿಬ್ಬಂದಿ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದ್ದರು ಎಂದು ದೂರು ನೀಡಲಾಗಿತ್ತು. ದಾಬಸ್ ಪೇಟೆ ಠಾಣೆ ಪೊಲೀಸರು ಅನಂತಕುಮಾರ್ ಹೆಗಡೆ, ಭದ್ರತಾ ಸಿಬ್ಬಂದಿ ಶ್ರೀಧರ್, ಕಾರು ಚಾಲಕ ಮಹೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

