ಬೆಂಗಳೂರು: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ಮಲ್ಲು ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ನೊಂದ ಸಂತ್ರಸ್ತೆ ನೀಡಿದ ದೂರಿನನ್ವಯ ಉಪ್ಪಾರಪೇಟೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಹೌದು. ಶಿಸ್ತು ಮತ್ತು ಸೇವೆಗೆ ಹೆಸರಾಗಬೇಕಿದ್ದ ಸರ್ಕಾರಿ ಕಚೇರಿಯಲ್ಲೇ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದ ಮೇಲೆ ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ಮಲ್ಲು ಎಂಬುವವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಕಚೇರಿಯ ಆವರಣದಲ್ಲಿ ಸಂತ್ರಸ್ತೆಯನ್ನು ಬಲವಂತವಾಗಿ ತಬ್ಬಿಕೊಂಡು, ಮುತ್ತು ನೀಡಲು ಯತ್ನಿಸಿ, ಅಂಗಾಂಗ ಮುಟ್ಟಿ ದೌರ್ಜನ್ಯ ಎಸಗಿದ ಆರೋಪ ಇವರ ಮೇಲಿದೆ. ಸಂತ್ರಸ್ತೆ ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಉನ್ನತ ಅಧಿಕಾರಿಯ ಈ ಕಾಮಕಾಂಡ ಈಗ ಇಡೀ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.
ಘಟನೆಯ ವಿವರ
ಗಾಂಧೀನಗರದಲ್ಲಿರುವ ನರ್ಸಿಂಗ್ ಕೌನ್ಸಿಲ್ ಕಚೇರಿಯಲ್ಲಿ ಕೆಲಸ ಮಾಡುವಾಗ ರಿಜಿಸ್ಟ್ರಾರ್ ಮಲ್ಲು ಅವರು ತಮಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.ಆರೋಪಿಯು ಮಹಿಳೆಯನ್ನು ಬಲವಂತವಾಗಿ ತಬ್ಬಿಕೊಂಡು ಮುತ್ತು ನೀಡಲು ಯತ್ನಿಸಿದ್ದಾನೆ. ಅಲ್ಲದೆ, ಅಂಗಾಂಗ ಮುಟ್ಟಿ ಎಳೆದಾಡಿ ವಿಕೃತಿ ಮೆರೆದಿದ್ದಾನೆ ಎಂದು ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.
ಬಲವಂತದ ಯತ್ನ: ಕಚೇರಿಯ ಆವರಣದಲ್ಲಿ ಕಾರಿನ ಬಳಿ ಮಹಿಳೆಯನ್ನು ತಡೆದು ನಿಲ್ಲಿಸಿ, ಬಲವಂತವಾಗಿ ಕಾರು ಹತ್ತಿಸಿಕೊಳ್ಳಲು ರಿಜಿಸ್ಟ್ರಾರ್ ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.
ಪೊಲೀಸ್ ಕ್ರಮ:
ಸಂತ್ರಸ್ತೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ (Upparpet Police Station) ನೀಡಿದ ದೂರಿನ ಆಧಾರದ ಮೇಲೆ ರಿಜಿಸ್ಟ್ರಾರ್ ಮಲ್ಲು ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಪೊಲೀಸರು ಕೂಡಲೇ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

