HomeLatest News'ಸಕಾಲ' ಸೇವೆಯಲ್ಲಿ ಬಳ್ಳಾರಿಯೇ ಫಸ್ಟ್ : ರಾಜ್ಯಮಟ್ಟದ ಶ್ರೇಯಾಂಕ ಪಟ್ಟಿಯಲ್ಲಿ ಗಣಿನಾಡಿಗೆ ಮೊದಲ ಸ್ಥಾನ.!

‘ಸಕಾಲ’ ಸೇವೆಯಲ್ಲಿ ಬಳ್ಳಾರಿಯೇ ಫಸ್ಟ್ : ರಾಜ್ಯಮಟ್ಟದ ಶ್ರೇಯಾಂಕ ಪಟ್ಟಿಯಲ್ಲಿ ಗಣಿನಾಡಿಗೆ ಮೊದಲ ಸ್ಥಾನ.!

ಬಳ್ಳಾರಿ :    ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಸಕಾಲ’ ಯೋಜನೆಯ ಮಾರ್ಚ್ ತಿಂಗಳ ಜಿಲ್ಲಾವಾರು ಕಾರ್ಯಕ್ಷಮತೆಯ ವರದಿ ಬಿಡುಗಡೆಯಾಗಿದ್ದು, ಗಣಿನಾಡು ಬಳ್ಳಾರಿ ಜಿಲ್ಲೆಯು ರಾಜ್ಯದಲ್ಲೇ ಅತ್ಯುತ್ತಮ ಪ್ರಗತಿ ಸಾಧಿಸಿ ಮೊದಲ ಸ್ಥಾನ ಅಲಂಕರಿಸಿದೆ.

ಸಕಾಲದ ವಿವಿಧ ಮಾನದಂಡಗಳಾದ ಅರ್ಜಿ ವಿಲೇವಾರಿ, ವೇಗ, ನಿಗದಿತ ಅವಧಿಯೊಳಗಿನ ವಿಲೇವಾರಿ ಮತ್ತು ತಿರಸ್ಕೃತಗೊಂಡ ಅರ್ಜಿಗಳ ಪ್ರಮಾಣವನ್ನು ಆಧರಿಸಿ ಈ ಶ್ರೇಯಾಂಕ ನೀಡಲಾಗುತ್ತದೆ.

ಸಾರ್ವಜನಿಕರ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡುವಲ್ಲಿ ಬಳ್ಳಾರಿ ಜಿಲ್ಲೆಯು ಮೇಲುಗೈ ಸಾಧಿಸಿದೆ. ಬಳ್ಳಾರಿ ಜಿಲ್ಲೆಯು ಶೇ.97.91 ರಷ್ಟು ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಕಾಲ ಸೇವೆಯು ರಾಜ್ಯ ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ನಾಗರಿಕರಿಗೆ ನಿಗದಿತ ಅವಧಿಯೊಳಗೆ ಸರ್ಕಾರಿ ಸೇವೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮದಡಿ, ಜನಸಾಮಾನ್ಯರು ಸಲ್ಲಿಸುವ ಅರ್ಜಿಗಳಿಗೆ ಸರ್ಕಾರಿ ಕಚೇರಿಗಳು ವಿಳಂಬ ಮಾಡದೆ, ಕಾನೂನುಬದ್ಧವಾಗಿ ನಿಗದಿಪಡಿಸಿದ ಕಾಲಮಿತಿಯೊಳಗೆ ಸೇವೆ ನೀಡುವುದೇ ‘ಸಕಾಲ’ ಸೇವೆಯಾಗಿದೆ.

ಕಂದಾಯ ಇಲಾಖೆಯ ಜಾತಿ, ಆದಾಯ ಮತ್ತು ವಾಸಸ್ಥಳ ದೃಢೀಕರಣ ಪತ್ರ. ಸಾರಿಗೆ ಇಲಾಖೆಯ ಚಾಲನಾ ಪರವಾನಗಿ, ವಾಹನ ನೋಂದಣಿ. ನಗರ- ಸ್ಥಳೀಯ ಸಂಸ್ಥೆಗಳಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರ, ಖಾತಾ ಬದಲಾವಣೆ. ಪೊಲೀಸ್ ಇಲಾಖೆಯಲ್ಲಿನ ಪಾಸ್‌ಪೋರ್ಟ್ ಪರಿಶೀಲನೆ ಹಾಗೂ ಇತರೆ ಸೇರಿದಂತೆ 100 ಕ್ಕೂ ಹೆಚ್ಚು ಸೇವೆಗಳನ್ನು ಸಕಾಲದಲ್ಲಿ ಪಡೆಯಬಹುದಾಗಿದೆ.

*ಟಾಪ್ 5 ಜಿಲ್ಲೆಗಳ ವಿವರ:*

ಬಳ್ಳಾರಿ (ಮೊದಲ ಸ್ಥಾನ – 78.65 ಅಂಕ)

ಚಾಮರಾಜನಗರ (ಎರಡನೇ ಸ್ಥಾನ – 78.45 ಅಂಕ)

ಧಾರವಾಡ (ಮೂರನೇ ಸ್ಥಾನ – 78.38 ಅಂಕ)

ಕಲಬುರಗಿ (ನಾಲ್ಕನೇ ಸ್ಥಾನ – 78.27 ಅಂಕ)

ಹಾವೇರಿ (ಐದನೇ ಸ್ಥಾನ – 78.26 ಅಂಕ)

ಹೆಚ್ಚು ಜನಸಂಖ್ಯೆ ಮತ್ತು ಅರ್ಜಿಗಳ ಒತ್ತಡವಿರುವ ಬೆಂಗಳೂರು ನಗರ (32ನೇ ಸ್ಥಾನ) ಹಾಗೂ ಬೆಂಗಳೂರು ಗ್ರಾಮಾಂತರ (31ನೇ ಸ್ಥಾನ) ಜಿಲ್ಲೆಗಳು ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿವೆ. ಬೆಂಗಳೂರು ನಗರದಲ್ಲಿ ಶೇ.11.19 ರಷ್ಟು ಅರ್ಜಿಗಳು ತಿರಸ್ಕೃತಗೊಂಡಿರುವುದು ಹಿನ್ನಡೆಗೆ ಕಾರಣವಾಗಿದೆ.

ರಾಜ್ಯಾದ್ಯಂತ ಮಾರ್ಚ್ ತಿಂಗಳಲ್ಲಿ ಲಕ್ಷಾಂತರ ಅರ್ಜಿಗಳು ಸಕಾಲ ಅಡಿಯಲ್ಲಿ ಸಲ್ಲಿಕೆಯಾಗಿದ್ದು, ಬೆಳಗಾವಿ (1,49,236) ಮತ್ತು ತುಮಕೂರು (1,19,794) ಜಿಲ್ಲೆಗಳಲ್ಲಿ ಅತಿ ಹೆಚ್ಚು ಸ್ವೀಕೃತಿ ದಾಖಲಾಗಿದೆ. ಆದರೆ ಕಾರ್ಯಕ್ಷಮತೆ ಆಧಾರದ ಮೇಲೆ ನಿಗದಿತ ಅವಧಿಯೊಳಗೆ ಅರ್ಜಿಗಳ ವಿಲೇವಾರಿಯಲ್ಲಿ ಬಳ್ಳಾರಿ ಜಿಲ್ಲೆಯು ಅಗ್ರಸ್ಥಾನ ಕಾಯ್ದುಕೊಂಡಿದೆ.

ಬಳ್ಳಾರಿ ಜಿಲ್ಲೆಯು ಸರ್ಕಾರಿ ಸಂಬಂಧಿತ ಸಾರ್ವಜನಿಕರ ಕೆಲಸಗಳನ್ನು ಕಾಲಮಿತಿಯೊಳಗೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದು, ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ. ಸರ್ಕಾರಿ ಸೇವೆಗಳನ್ನು ಜನರಿಗೆ ಸಕಾಲದಲ್ಲಿ ತಲುಪಿಸುವ ನಿಟ್ಟಿನಲ್ಲಿ ಈ ವರದಿಯು ಜಿಲ್ಲಾಡಳಿತದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ಸಂದರ್ಭದಲ್ಲಿ ಅಧಿಕಾರಿ- ಸಿಬ್ಬಂದಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಅಭಿನಂದನೆ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular