ಆದಿತ್ಯ ಧರ್ ನಿರ್ದೇಶನದ ಧುರಂಧರ್ ಮೊದಲ ಭಾಗ ಯಶಸ್ಸು ಸಾಧಿಸಿದ ಬೆನ್ನಲ್ಲೇ ಇದೀಗ ಅದರ ಮುಂದುವರಿದ ಭಾಗ ಧುರಂಧರ್ ದ ರಿವೇಂಜ್ ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ.
ಮಾರ್ಚ್ 19ರಂದು ಬಿಡುಗಡೆಗೊಂಡ ಈ ಚಿತ್ರ ಈಗಾಗಲೇ ಎರಡು ವಾರಗಳ ಪ್ರದರ್ಶನವನ್ನು ಯಶಸ್ವಿಯಾಗಿ ಪೂರೈಸಿದ್ದು, ಮೆಚ್ಚುಗೆ ಜತೆಗೆ ಟೀಕೆಗಳನ್ನೂ ಸಹ ಪಡೆದುಕೊಂಡಿದೆ. ಕೆಲವರು ಈ ಚಿತ್ರವನ್ನು ಹಾಡಿಹೊಗಳಿದರೆ, ಇನ್ನೂ ಕೆಲವರು ಇದು ಬಿಜೆಪಿ ಪಕ್ಷದ ಪ್ರಚಾರಕ್ಕಾಗಿ ತಯಾರಿಸಿದ ಚಿತ್ರ ಎಂದು ಟೀಕೆ ಮಾಡಿದ್ದಾರೆ.
ರಾಜಕೀಯವಾಗಿ ಅದೇನೇ ಇರಲಿ ಚಿತ್ರ ಮಾತ್ರ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದೆ. ಎರಡು ವಾರಕ್ಕೆ ಧುರಂಧರ್ ದ ರಿವೇಂಜ್ ಬಾಕ್ಸ್‌ಆಫೀಸ್‌ನಲ್ಲಿ ವಿಶ್ವದಾದ್ಯಂತ 1435 ಕೋಟಿ ರೂಗಳನ್ನು ವಿಶ್ವದಾದ್ಯಂತ ಗಳಿಕೆ ಮಾಡುವ ಮೂಲಕ ಈ ಹಿಂದೆ 1215 ಕೋಟಿ ರೂ ಗಳಿಸಿದ್ದ ಕೆಜಿಎಫ್ ಚಾಪ್ಟರ್ 2 ಹಾಗೂ 1230 ಕೋಟಿ ರೂ ಗಳಿಸಿದ್ದ ಆರ್‌ಆರ್‌ಆರ್ ಚಿತ್ರವನ್ನು ಹಿಂದಿಕ್ಕಿದೆ. ಅಲ್ಲದೇ ಧುರಂಧರ್ ಮೊದಲ ಭಾಗ 1307 ಕೋಟಿ ಗಳಿಕೆ ಮಾಡಿತ್ತು. ಇದನ್ನೂ ಸಹ ಹಿಂದಿಕ್ಕಿರುವ ಧುರಂಧರ್ ದ ರಿವೇಂಜ್ ಸದ್ಯ ವಿಶ್ವದಾದ್ಯಂತ ಅತಿಹೆಚ್ಚು ಗಳಿಕೆ ಮಾಡಿದ ಭಾರತದ ಚಿತ್ರಗಳ ಪೈಕಿ ನಾಲ್ಕನೇ ಸ್ಥಾನಕ್ಕೇರಿದೆ.
ಹೀಗೆ ಕೋಟಿ ಕೋಟಿ ಹಣದ ಹೊಳೆ ಹರಿಸಿರುವ ಧುರಂಧರ್ ದ ರಿವೇಂಜ್ ವಿಶ್ವದಾದ್ಯಂತ ಅತಿಹೆಚ್ಚು ಗಳಿಕೆ ಮಾಡಿದ ಭಾರತದ ಚಿತ್ರ ಎಂಬ ಹೆಸರು ಮಾಡಲು ಇನ್ನೂ ಮೂರು ಚಿತ್ರಗಳ ಕಲೆಕ್ಷನ್ ದಾಖಲೆಯನ್ನು ಮುರಿಯಬೇಕಿದೆ.
ಹೌದು, ಪುಷ್ಪ ದ ರೂಲ್ 1742 ಕೋಟಿ ರೂ ಗಳಿಸಿ ಮೂರನೇ ಸ್ಥಾನದಲ್ಲಿದ್ದು, 1788 ಕೋಟಿ ರೂ ಗಳಿಸಿರುವ ಬಾಹುಬಲಿ 2 ದಿ ಕನ್ಕ್ಲೂಷನ್ ಎರಡನೇ ಸ್ಥಾನದಲ್ಲಿದೆ ಹಾಗೂ 2070 ಕೋಟಿ ಗಳಿಕೆ ಮಾಡಿರುವ ದಂಗಲ್ ವಿಶ್ವದಾದ್ಯಂತ ಅತಿಹೆಚ್ಚು ಗಳಿಕೆ ಮಾಡಿರುವ ಭಾರತದ ಚಿತ್ರ ಎನಿಸಿಕೊಂಡಿದೆ.
ಹೀಗೆ ಈ ಮೂರು ಚಿತ್ರಗಳ ಗಳಿಕೆಯನ್ನು ಹಿಂದಿಕ್ಕಿದರೆ ಧುರಂಧರ್ ದ ರಿವೇಂಜ್ ವಿಶ್ವದಾದ್ಯಂತ ಅತಿಹೆಚ್ಚು ಗಳಿಕೆ ಮಾಡಿದ ಭಾರತದ ಚಿತ್ರ ಎಂಬ ದಾಖಲೆಯನ್ನು ತನ್ನದಾಗಿಸಿಕೊಳ್ಳಲಿದೆ.

