ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಕಣ ಅಂತಿಮವಾಗಿದೆ. ಶಾಮನೂರು ಶಿವಶಂಕರಪ್ಪ ನಿಧನದ ಕಾರಣ ಎದುರಾಗಿರುವ ಉಪ ಚುನಾವಣೆಯಲ್ಲಿ ಶಾಮನೂರು ಕುಟುಂಬದ ಸಮರ್ಥ್ ಶಾಮನೂರು ಕಾಂಗ್ರೆಸ್ ಅಭ್ಯರ್ಥಿ.
ಏಪ್ರಿಲ್ 9ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿಯಿಂದ ಶ್ರೀನಿವಾಸ್ ದಾಸಕರಿಯಪ್ಪ ಅಭ್ಯರ್ಥಿಗಳು. ಏಪ್ರಿಲ್ 9ರಂದು ನಡೆಯಲಿರುವ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಮತಗಳು ಯಾರಿಗೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಮೇ 4ರಂದು ಉಪ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಮುಸ್ಲಿಂ ಅಭ್ಯರ್ಥಿ ಕೈತಪ್ಪಿದ್ದು ಮತ್ತು ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಜೊತೆಗಿನ ಜಟಾಪಟಿ ಕಾರಣ ಸಚಿವ ಜಮೀರ್ ಅಹ್ಮದ್ ಖಾನ್ ದಾವಣಗೆರೆ ಉಪ ಚುನಾವಣೆ ಪ್ರಚಾರದಿಂದ ದೂರ ಉಳಿದಿದ್ದಾರೆ.
ದಾವಣಗೆರೆ ದಕ್ಷಿಣದಲ್ಲಿ ಸುಮಾರು 80,000 ಮುಸ್ಲಿಂ ಸಮುದಾಯದ ಮತಗಳಿವೆ. ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಪ್ರಚಾರದಿಂದ ದೂರ ಉಳಿದ ಕಾರಣ ಮುಸ್ಲಿಮರು ಸಹ ಮುನಿಸಿಕೊಂಡಿದ್ದಾರೆ.
ಕೇರಳದಲ್ಲಿ ಜಮೀರ್ ಬ್ಯುಸಿ: ಸದ್ಯ ಜಮೀರ್ ಅಹ್ಮದ್ ಖಾನ್ ಏಪ್ರಿಲ್ 9ರಂದು ನಡೆಯುವ ಕೇರಳ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಬಾಗಲಕೋಟೆಯಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಮುಸ್ಲಿಮರು ಜಮೀರ್ ಅಹ್ಮದ್ ಅವರನ್ನು ಪ್ರಚಾರಕ್ಕೆ ಕಳಿಸಿ ಎಂದು ಬೇಡಿಕೆ ಇಟ್ಟರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು, “ಸಚಿವ ಜಮೀರ್ ಅವರು ಏಪ್ರಿಲ್ 4ರ ತನಕ ಕೇರಳ ಪ್ರಚಾರದಲ್ಲಿ ಇರಲಿದ್ದಾರೆ. ಏಪ್ರಿಲ್ 5ರಂದು ದಾವಣಗೆರೆ ದಕ್ಷಿಣದಲ್ಲಿ ಪ್ರಚಾರ ಮಾಡಲಿದ್ದಾರೆ. ಏಪ್ರಿಲ್ 6,7ರಂದು ಬಾಗಲಕೋಟೆಯಲ್ಲಿ ಪ್ರಚಾರ ಮಾಡಲಿದ್ದಾರೆ” ಎಂದು ಹೇಳಿದ್ದಾರೆ.
ಈ ಮೂಲಕ ಜಮೀರ್ ಅಹ್ಮದ್ ಖಾನ್ ದಾವಣಗೆರೆಯಲ್ಲಿ ಪ್ರಚಾರ ಮಾಡುವುದು ಕೇವಲ ಒಂದು ದಿನ ಮಾತ್ರ ಎಂಬುದು ಖಚಿತವಾಗಿದೆ. ಈಗ ಉಪ ಚುನಾವಣೆಯಲ್ಲಿ ಮುಸ್ಲಿಮರು ಕಾಂಗ್ರೆಸ್ ವಿರುದ್ಧವಾಗಿ ಮತದಾನ ಮಾಡಿದರೆ ಶಾಮನೂರು ಕುಟುಂಬದ ಪ್ರತಿಷ್ಠೆಗೆ ಧಕ್ಕೆ ಆಗಲಿದೆ.
ಸಮರ್ಥ್ ಶಾಮನೂರು ಅಭ್ಯರ್ಥಿಯಾದ ಬಳಿಕ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಾದಿಕ್ ಪೈಲ್ವಾನ್ ಮನವೊಲಿಕೆ ಮಾಡುವಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಅವರು ಸಮರ್ಥ್ ಶಾಮನೂರು ಬೆಂಬಲಿಸುವುದಾಗಿ ಹೇಳಿದ್ದಾರೆ.
ದಾವಣಗೆರೆ ದಕ್ಷಿಣದ ಚುನಾವಣಾ ಕಣದಲ್ಲಿ 14 ಮುಸ್ಲಿಂ ಅಭ್ಯರ್ಥಿಗಳಿದ್ದಾರೆ. ಎಸ್‌ಡಿಪಿಐ ಪಕ್ಷದ ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆ ಚುನಾವಣಾ ಕಣದಲ್ಲಿದ್ದು, ಮುಸ್ಲಿಮರು ಅವರನ್ನು ಬೆಂಬಲಿಸಿದರೆ ಕಾಂಗ್ರೆಸ್‌ಗೆ ಸೋಲಿನ ಭೀತಿ ಎದುರಾಗಲಿದೆ.
ಉಪ ಚುನಾವಣೆ ಟಿಕೆಟ್ ಮುಸ್ಲಿಮರಿಗೆ ನೀಡಬೇಕು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಭಾರೀ ಒತ್ತಾಯ ಮಾಡಿದ್ದರು. ಆದರೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಏಕವಚನದಲ್ಲಿ ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದ ಬಳಿಕ ಜಮೀರ್ ಸೈಲೆಂಟ್ ಆಗಿದ್ದು, ಮುಸ್ಲಿಮರು ಅಸಮಾಧಾನಗೊಂಡಿದ್ದಾರೆ.
ಸಿದ್ದರಾಮಯ್ಯ ಆಪ್ತರಾದ ಜಮೀರ್ ಅಹ್ಮದ್ ಖಾನ್ ಸಿದ್ದರಾಮಯ್ಯ ಬಳಿ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ, ಅಲ್ಲಿಗೆ ಪ್ರಚಾರಕ್ಕೆ ಹೋಗಬೇಕೇ? ಎಂದು ಪ್ರಶ್ನಿಸಿದ್ದಾರೆಂದು ತಿಳಿದು ಬಂದಿದೆ. ಆದ್ದರಿಂದ ಸಾದಿಕ್ ಪೈಲ್ವಾನ್ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭೇಟಿ ಮಾಡಿದಾಗಲೂ ಜಮೀರ್ ಅಲ್ಲಿ ಕಾಣಿಸಿಕೊಂಡಿಲ್ಲ.
ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಬೇಡವಾದರೆ ದಾವಣಗೆರೆ ದಕ್ಷಿಣಕ್ಕೆ ಹೋಗುವುದಿಲ್ಲ ಎಂದು ಜಮೀರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಹೇಳಿದ್ದರು. ತಮ್ಮ ಸಮುದಾಯದ ಸದಸ್ಯರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವಂತೆ ಧಾರ್ಮಿಕ ಗುರುಗಳು ಕರೆ ನೀಡಿದ್ದಾರೆ ಎಂಬ ಮಾಹಿತಿಯೂ ಇದೆ.
ಧಾರ್ಮಿಕ ಗುರುಗಳ ಕರೆ ಬಳಿಕ ದಾವಣಗೆರೆಯಲ್ಲಿ ಪ್ರಚಾರ ಮಾಡಿದರೆ ಅವರ ಕೋಪಕ್ಕೆ ಗುರಿಯಾಗುವ ಸಾಧ್ಯತೆ ಇರುವ ಕಾರಣ ಜಮೀರ್ ದಾವಣಗೆರೆ ದಕ್ಷಿಣ ಪ್ರಚಾರದಿಂದ ದೂರ ಉಳಿದಿದ್ದು, ಕಾಂಗ್ರೆಸ್‌ಗೆ ಮುಸ್ಲಿಮರ ಮತಗಳು ಬರಲಿದೆಯೇ?, ಇಲ್ಲವೇ? ಎಂಬುದು ಚರ್ಚೆಯ ವಿಚಾರವಾಗಿದೆ.

