ಬೆಂಗಳೂರು: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರಾಪಿಡೋ ಬೈಕ್ ಸವಾರನನ್ನು ಇಂದಿರಾನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಡಿಜೆ ಹಳ್ಳಿ ವ್ಯಾಪ್ತಿಯ ನಿವಾಸಿ ಮಹಮ್ಮದ್ ಖಾಜಾ(21) ಬಂಧಿತ ಆರೋಪಿ. ಇಂದಿರಾನಗರ ಪಿಜಿಯಲ್ಲಿ ವಾಸವಾಗಿದ್ದ ಹೊರ ರಾಜ್ಯದ ಯುವತಿ ಮಾರ್ಚ್ 26ರಂದು ರಾತ್ರಿಗೆ 8 ಗಂಟೆ ಸುಮಾರಿಗೆ ಬಿಟಿಎಂ ಲೇಔಟ್ ನಿಂದ ರಾಪಿಡೋ ಬುಕ್ ಮಾಡಿದ್ದರು. ಚಾಲಕ ಖಾಜಾ ದಾರಿಯುದ್ದಕ್ಕೂ ಯುವತಿ ಜತೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಇದರಿಂದ ಆತಂಕಗೊಂಡ ಯುವತಿ ಸ್ನೇಹಿತೆಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಗಾಬರಿಯಾಗಬೇಡ, ವಿಡಿಯೋ ರೆಕಾರ್ಡ್ ಮಾಡಿಕೊ ಎಂದು ಹೇಳಿದ್ದಾಳೆ. ವಿಡಿಯೋ ಮಾಡಲು ಆರಂಭಿಸಿದರೂ ಆರೋಪಿ ಅಸಭ್ಯ ವರ್ತನೆ ಮುಂದುವರೆಸಿದ್ದ. ನಂತರ ಯುವತಿ ಇಂದಿರಾನಗರ ಠಾಣೆಗೆ ವಿಡಿಯೋ ಸಮೇತ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

