HomeEntertainment'ಸಿಲ್ಸಿಲಾ' ಸಿನಿಮಾದ ಹಿಂದಿದೆ ರಹಸ್ಯ ಕಥೆ: ಜಯಾ ಬಚ್ಚನ್ ಹಾಕಿದ್ದ ಆ ಒಂದು ಕಠಿಣ ಷರತ್ತು...

‘ಸಿಲ್ಸಿಲಾ’ ಸಿನಿಮಾದ ಹಿಂದಿದೆ ರಹಸ್ಯ ಕಥೆ: ಜಯಾ ಬಚ್ಚನ್ ಹಾಕಿದ್ದ ಆ ಒಂದು ಕಠಿಣ ಷರತ್ತು ಏನು ಗೊತ್ತಾ?

ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ‘ಸಿಲ್ಸಿಲಾ’ ಸಿನಿಮಾ ಅತ್ಯಂತ ಹೆಚ್ವು ಚರ್ಚೆಗೊಳಗಾದ ಚಿತ್ರಗಳಲ್ಲಿ ಒಂದಾಗಿದೆ. ಕೇವಲ ವಿವಾಹೇತರ ಬಾಂಧವ್ಯದ ಕಥಾಹಂದರ ಮಾತ್ರವಲ್ಲದೆ, ಆ ಸಮಯದಲ್ಲಿ ಭಾರೀ ಸದ್ದು ಮಾಡುತ್ತಿದ್ದ ಅಮಿತಾಭ್ ಬಚ್ಚನ್ ಮತ್ತು ರೇಖಾ ಅವರ ಅಫೇರ್ ವಿಕ್ರಮದ ನಡುವೆಯೇ ಜಯಾ ಬಚ್ಚನ್ ಅವರನ್ನು ಈ ಸಿನಿಮಾದಲ್ಲಿ ಒಂದಾಗಿ ತಂದಿದ್ದು ಬಹುದೊಡ್ಡ ಸಾಹಸವಾಗಿತ್ತು. ಆದರೆ ಈ ಸಿನಿಮಾ ಸೆಟ್ಟೇರುವ ಮುನ್ನ ನಿರ್ದೇಶಕ ಯಶ್ ಚೋಪ್ರಾ ಅವರು ನಟಿಯರ ಆಯ್ಕೆಯಲ್ಲಿ ದೊಡ್ಡ ಮಟ್ಟದ ಗೊಂದಲಗಳನ್ನು ಎದುರಿಸಿದ್ದರು.

ಆರಂಭದಲ್ಲಿ ಯಶ್ ಚೋಪ್ರಾ ಅವರು ಸ್ಮಿತಾ ಪಾಟೀಲ್ ಮತ್ತು ಪ್ರವೀಣ್ ಬಾಬಿ ಅವರನ್ನು ಅಮಿತಾಭ್ ಎದುರು ನಾಯಕಿಯರಾಗಿ ಆಯ್ಕೆ ಮಾಡಿದ್ದರು. ಆದರೆ ಪ್ರವೀಣ್ ಬಾಬಿ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ, ಅವರನ್ನು ಹಾಗೂ ಸ್ಮಿತಾ ಪಾಟೀಲ್ ಇಬ್ಬರನ್ನೂ ಚಿತ್ರದಿಂದ ಕೈಬಿಡಲಾಯಿತು. ನಂತರ ಈ ಪಾತ್ರಗಳಿಗೆ ರೇಖಾ ಹಾಗೂ ಜಯಾ ಬಚ್ಚನ್ ಅವರನ್ನು ಕರೆತರಲು ಯಶ್ ಚೋಪ್ರಾ ನಿರ್ಧರಿಸಿದರು. ರೇಖಾ ತಕ್ಷಣವೇ ಒಪ್ಪಿಕೊಂಡರೂ, ಜಯಾ ಬಚ್ಚನ್ ಈ ಸಿನಿಮಾ ಮಾಡಲು ತೀವ್ರ ನಿರಾಕರಣೆ ವ್ಯಕ್ತಪಡಿಸಿದ್ದರು.

ಈ ಹಂತದಲ್ಲಿ ನಟ ಸಂಜೀವ್ ಕುಮಾರ್ ಅವರು ಮಧ್ಯಪ್ರವೇಶಿಸಿ ಜಯಾ ಬಚ್ಚನ್ ಮನವೊಲಿಸುವಲ್ಲಿ ಯಶಸ್ವಿಯಾದರು. ‘ಕೋಶಿಶ್’ ಸಿನಿಮಾದಿಂದಲೇ ಜಯಾ ಹಾಗೂ ಸಂಜೀವ್ ನಡುವೆ ಗಟ್ಟಿ ಬಾಂಧವ್ಯವಿತ್ತು ಮತ್ತು ಜಯಾ ಅವರನ್ನು ತಮ್ಮ ಸ್ವಂತ ತಂಗಿಯಂತೆ ಭಾವಿಸುತ್ತಿದ್ದರು. ಸಂಜೀವ್ ಕುಮಾರ್ ಅವರ ಮಾತಿಗೆ ಗೌರವ ನೀಡಿ ಜಯಾ ಸಿನಿಮಾ ಮಾಡಲು ಒಪ್ಪಿಕೊಂಡರೂ, ಒಂದು ಕಠಿಣ ಷರತ್ತು ವಿಧಿಸಿದ್ದರು. ಅದೇನೆಂದರೆ ಶೂಟಿಂಗ್ ಸೆಟ್‌ನಲ್ಲಿ ತಮ್ಮ ದೃಶ್ಯಗಳಿಲ್ಲದಿದ್ದರೂ ತಾವು ಸದಾ ಉಪಸ್ಥಿತರಿರಬೇಕು ಎಂಬುದು. ರೇಖಾ ಮತ್ತು ಅಮಿತಾಭ್ ಅವರಿದ್ದ ಕಾರಣಕ್ಕೆ ಜಯಾ ಈ ಷರತ್ತು ಹಾಕಿದ್ದರೆಂದು ಆ ದಿನಗಳನ್ನು ಸಿನಿಮಾ ತಜ್ಞರು ನೆನಪಿಸಿಕೊಳ್ಳುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆ ದಿನಗಳಲ್ಲಿ ಯಶ್ ಚೋಪ್ರಾ ಅವರ ಸಾಲು ಸಾಲು ಸಿನಿಮಾಗಳು ಸೋತಿದ್ದರಿಂದ ‘ಸಿಲ್ಸಿಲಾ’ ಅವರ ವೃತ್ತಿಜೀವನಕ್ಕೆ ಅತ್ಯಂತ ನಿರ್ಣಾಯಕವಾಗಿತ್ತು. ಅಮಿತಾಭ್ ಬಚ್ಚನ್ ಅವರ ಸಲಹೆಯ ಮೇರೆಗೆ ಈ ಹೊಸ ತಾರಾಗಣವನ್ನು ಅಂತಿಮಗೊಳಿಸಲಾಗಿತ್ತು. ಆದರೆ ಇಷ್ಟೆಲ್ಲಾ ವಿವಾದ ಹಾಗೂ ಕುತೂಹಲಗಳ ನಡುವೆ ತೆರೆಕಂಡ ‘ಸಿಲ್ಸಿಲಾ’ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಇದರ ಬೆನ್ನಲ್ಲೇ ಬಂದ ಮಹೇಶ್ ಭಟ್ ಅವರ ‘ಅರ್ಥ್’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular