ಬೆಂಗಳೂರು: ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯನ್ನು ಆತ್ಮವಿಶ್ವಾಸದಿಂದ ಓದಲು ಹಾಗೂ ಗಣಿತದ ಆರಂಭಿಕ ಸಾಮರ್ಥ್ಯ ಗಳಿಸಲು ರಾಜ್ಯ ಸರ್ಕಾರ ಕೃತಕ ಬುದ್ಧಿಮತ್ತೆ ಆಧಾರಿತ ಕಲಿಕಾ ದೀಪ ಕಾರ್ಯಕ್ರಮವನ್ನು ಎರಡು ವರ್ಷಗಳ ಹಿಂದೆ ಅನುಷ್ಠಾನಗೊಳಿಸಿದೆ.
ಇದನ್ನು 2,000 ಶಾಲೆಗಳಿಗೆ ವಿಸ್ತರಿಸಲಾಗುವುದು. ನಾಲ್ಕರಿಂದ ಆರನೇ ತರಗತಿ ವಿದ್ಯಾರ್ಥಿಗಳಿಗಾಗಿ ಕಲಿಕಾ ದೀಪ ಕಾರ್ಯಕ್ರಮ ರೂಪಿಸಲಾಗಿದೆ. 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಲಾಭ ಪಡೆಯಲಿದ್ದಾರೆ. ಸಕ್ರಿಯ ಕಂಪ್ಯೂಟರ್ ಸೌಲಭ್ಯ ಹೊಂದಿದ ರಾಜ್ಯದ ಎರಡು ಸಾವಿರ ಪ್ರಾಥಮಿಕ ಶಾಲೆಗಳಲ್ಲಿ ಏಕ್ ಸ್ಟಾಪ್ ಫೌಂಡೇಶನ್ ಸಹಯೋಗದಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು.
ಆರಂಭಿಕ ಹಂತದಲ್ಲಿ ಈ ಯೋಜನೆಯನ್ನು 1145 ಶಾಲೆಗಳಲ್ಲಿ 1.38 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿತ್ತು. ಏಳು ತಿಂಗಳ ಅವಧಿಗೆ ಇಂಟರ್ನೆಟ್ ವೆಚ್ಚವಾಗಿ 80 ಲಕ್ಷ ರೂ., ಪ್ರತಿ ಶಾಲೆಗೆ 10ರಂತೆ ಹೆಡ್ ಫೋನ್ ಖರೀದಿಗೆ 57.25 ಲಕ್ಷ ರೂ., ತರಬೇತುದಾರರ ತರಬೇತಿಗೆ 70 ಸಾವಿರ ರೂ. ಸೇರಿ ಒಟ್ಟಾರೆ 1.38 ಕೋಟಿ ರೂ. ವೆಚ್ಚದ ಯೋಜನೆಗೆ ಸರ್ಕಾರದ ಅನುಮೋದನೆ ನೀಡಲಾಗಿತ್ತು.
ಕಲಿಕಾ ದೀಪ ಯೋಜನೆಯಡಿ ಪ್ರತಿ ವಿದ್ಯಾರ್ಥಿಗೆ ವಾರದಲ್ಲಿ ಮೂರು ದಿನ 20 ನಿಮಿಷ ಕನ್ನಡ, ಇಂಗ್ಲಿಷ್ ಹಾಗೂ 20 ನಿಮಿಷ ಗಣಿತವನ್ನು ಅಭ್ಯಾಸ ಮಾಡಿಸಲಾಗುವುದು.

