ಬೆಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಮನಕಲಕುವ ಘಟನೆ ನಡೆದಿದೆ.
ಸಾಲಗಾರರದ ಕಾಟ ತಾಳಲಾರದೆ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ತಾಯಿ ಮತ್ತು ಅಕ್ಕ ಹಾಗೂ ಅಕ್ಕನ ಮಗನ ಕತ್ತು ಸೀಳಿದ ಬಳಿಕ ಯುವಕ ತಾನೂ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಾಯಿ ಮತ್ತು ಅಕ್ಕ ಇಬ್ಬರೂ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಉಳಿದ ಇಬ್ಬರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.
ತಾಯಿ ಆಶಾ(55), ಅಕ್ಕ ವರ್ಷಿತಾ(34) ಮೃತಪಟ್ಟಿದ್ದು, ಮೋಹನ ಗೌಡ(27), ಅಕ್ಕನ ಮಗ ಮಯಾಂಕ್(11) ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಲಗಾರರ ಕಾಟ ತಾಳದೇ ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ಮೋಹನ್ ಗೌಡ ಸಂಬಂಧಿಕರಿಗೆ ವಿಡಿಯೋ ಸಂದೇಶ ಕಳಿಸಿದ್ದಾನೆ. ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

