HomeSportsIPL 2026: ಪಡಿಕ್ಕಲ್, ಪಟಿದಾರ್ ಅಬ್ಬರ, ಕೊಹ್ಲಿ ಅರ್ಧಶತಕ; ಹೈದರಾಬಾದ್ ಮಣಿಸಿ ಶುಭಾರಂಭ ಮಾಡಿದ ಚಾಂಪಿಯನ್ಸ್...

IPL 2026: ಪಡಿಕ್ಕಲ್, ಪಟಿದಾರ್ ಅಬ್ಬರ, ಕೊಹ್ಲಿ ಅರ್ಧಶತಕ; ಹೈದರಾಬಾದ್ ಮಣಿಸಿ ಶುಭಾರಂಭ ಮಾಡಿದ ಚಾಂಪಿಯನ್ಸ್ ಆರ್‌ಸಿಬಿ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವನ್ನು ದಾಖಲಿಸುವ ಮೂಲಕ ಶುಭಾರಂಭ ಮಾಡಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ಆರಿಸಿಕೊಂಡು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ ಇಶಾನ್ ಕಿಶನ್ ಅಬ್ಬರದ ಅರ್ಧಶತಕ ಹಾಗೂ ಅನಿಕೇತ್‌ ವರ್ಮಾ ಅಬ್ಬರದ ಆಟದ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 202 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 15.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್ ಕಲೆಹಾಕಿತು.

ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ 7 ರನ್ ಹಾಗೂ ಟ್ರಾವಿಸ್ ಹೆಡ್ 11 ರನ್‌ಗೆ ವಿಕೆಟ್ ಒಪ್ಪಿಸಿದರು. ಬೆನ್ನಲ್ಲೇ ನಿತಿಶ್ ಕುಮಾರ್ ರೆಡ್ಡಿ ಕೇವಲ 1 ರನ್‌ಗೆ ಔಟ್ ಆದರು. ಈ ಮೂಲಕ ಕೇವಲ 29 ರನ್‌ಗೆ ತನ್ನ ಮೊದಲ ಮೂರು ವಿಕೆಟ್ ಕಳೆದುಕೊಂಡ ಸನ್ ರೈಸರ್ಸ್ ಹೈದರಾಬಾದ್ ಆರಂಭಿಕ ಆಘಾತ ಅನುಭಿಸಿತು. ಈ ಸಮಯದಲ್ಲಿ ನಾಲ್ಕನೇ ವಿಕೆಟ್‌ಗೆ ಜತೆಯಾದ ನಾಸಯಕ ಇಶಾನ್ ಕಿಶನ್ ಹೆನ್ರಿಚ್ ಕ್ಲಾಸೆನ್ 97 ರನ್‌ಗಳ ಜತೆಯಾಟವನ್ನಾಡುವ ಮೂಲಕ ಕುಸಿದಿದ್ದ ತಂಡಕ್ಕೆ ಸುಧಾರಣೆ ತಂದರು. ಕ್ಲಾಸೆನ್ 31 ರನ್ ಗಳಿಸಿ ಔಟ್ ಆದರೆ, ಇಶಾನ್ ಕಿಶನ್ 38 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 80 ರನ್ ಚಚ್ಚಿದರು. ಇನ್ನುಳಿದಂತೆ ಸಲಿಲ್ ಅರೋರ 9 ರನ್, ಹರ್ಷ್ ದುಬೆ 3, ಹರ್ಷಲ್ ಪಟೇಲ್ ಡಕ್‌ಔಟ್, ಡೇವಿಡ್ ಪೇನ್ ಅಜೇಯ 5, ಜಯ್‌ದೇವ್ ಉನಾದ್ಕತ್ ಅಜೇಯ 3 ರನ್ ಗಳಿಸಿದರು. ಇಶಾನ್ ಕಿಶನ್ ವಿಕೆಟ್ ಬಿದ್ದ ಬಳಿಕ ತಂಡದ ರನ್ ವೇಗ ಕುಸಿಯಲಿದೆ ಎಂಬ ನಿರೀಕ್ಷೆ ಹುಟ್ಟುತ್ತಿದ್ದಂತೆಯೇ ಅಬ್ಬರಿಸಲು ಆರಂಭಿಸಿದ ಅನಿಕೇತ್ ವರ್ಮಾ 18 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 43 ರನ್ ಬಾರಿಸಿ ಅಬ್ಬರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಜೇಕಬ್ ಡಫಿ ಹಾಗೂ ರೊಮಾರಿಯೊ ಶೆಫರ್ಡ್ ತಲಾ ಮೂರು ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ಅಭಿನಂದನ್ ಸಿಂಗ್ ಹಾಗೂ ಸುಯಶ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನಿಂಗ್ಸ್: ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಕೇವಲ 8 ರನ್‌ಗೆ ಔಟ್ ಆದರೆ, ಎರಡನೇ ವಿಕೆಟ್‌ಗೆ ಜತೆಯಾದ ವಿರಾಟ್ ಕೊಹ್ಲಿ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ದೇವದತ್ ಪಡಿಕ್ಕಲ್ 101 ರನ್‌ಗಳ ಜತೆಯಾಟವನ್ನಾಡಿದರು. ಪಡಿಕ್ಕಲ್ 26 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 61 ರನ್ ಬಾರಿಸಿದರು. ಇನ್ನುಳಿದಂತೆ ನಾಯಕ ರಜತ್ ಪಟಿದಾರ್ 12 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 31 ರನ್ ಗಳಿಸಿದರೆ, ಜಿತೇಶ್ ಶರ್ಮಾ ಡಕ್‌ಔಟ್, ಟಿಮ್ ಡೇವಿಡ್ ಅಜೇಯ 16 ರನ್ ಹಾಗೂ ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 69 ರನ್ ಬಾರಿಸಿದರು.

ಸನ್ ರೈಸರ್ಸ್ ಹೈದರಾಬಾದ್ ಪರ ಡೇವಿಡ್ ಪೇಯ್ನ್ ಎರಡು ವಿಕೆಟ್ ಪಡೆದರೆ, ಜಯ್‌ದೇವ್ ಉನಾದ್ಕತ್ ಹಾಗೂ ಹರ್ಷ್ ದುಬೆ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular