ಮೈಸೂರು: ಸಿಎಂ ಸ್ಥಾನ ವಿಚಾರಕ್ಕೂ, ಉಪಚುನಾವಣೆ ಫಲಿತಾಂಶಕ್ಕೂ ಯಾವುದೇ ಸಂಬಂಧವಿಲ್ಲ. ಪಕ್ಷದ ಹೈಕಮಾಂಡ್ ಅನುಮತಿಸಿದರೆ, ಇನ್ನೆರೆಡು ವರ್ಷವೂ ನಾನೇ ಬಜೆಟ್ ಮಂಡಿಸುತ್ತೇನೆ. ಹೈಕಮಾಂಡ್ ಸೂಚನೆಯ ಮೇರೆಗೆ ನಾವು ನಡೆಯುತ್ತೇವೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ದಾವಣಗೆರೆ ಹಾಗೂ ಬಾಗಲಕೋಟೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವ ವಿಶ್ವಾಸವಿದ್ದು, ಸೋಮವಾರದಿಂದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತೇನೆ. ನಂತರ ಏಪ್ರಿಲ್ 5 ರಂದು ಕೇರಳ ರಾಜ್ಯದ ಚುನಾವಣೆಯ ಪ್ರಚಾರಕ್ಕೂ ಹೋಗುತ್ತೇನೆ. ಈ ಹಿಂದೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿತ್ತು. ಇದು ನಮ್ಮ ಮುಂದಿನ ಗೆಲುವಿನ ದಿಕ್ಸೂಚಿಯಾಗಿದೆ. ಈಗ ದಾವಣಗೆರೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದ್ದಾರೆ.
ಈ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತೃತೀಯ ಭಾಷೆಯ ಅಂಕವನ್ನು ಪರಿಗಣಿಸದಿರಲು ತೀರ್ಮಾನ ಕೈಗೊಂಡಿದ್ದೇವೆ. ಎಸ್‌ಎಸ್‌ಎಲ್‌ಸಿ ಯಲ್ಲಿ 625 ಅಂಕಗಳನ್ನು 525 ಕ್ಕೆ ನಿಗದಿಪಡಿಸಲು ತೀರ್ಮಾನಿಸಲಾಗಿದೆ. ಸರ್ಕಾರದ ಯಾವುದೇ ತೀರ್ಮಾನಕ್ಕೆ ಬೆಂಬಲ ಇಲ್ಲವೇ ವಿರೋಧವೂ ವ್ಯಕ್ತವಾಗಬಹುದು. ಹಿಂದಿ ಭಾಷೆಯನ್ನು ಕಲಿಯುವುದರಲ್ಲಿ ಸರ್ಕಾರದ ವಿರೋಧವಿಲ್ಲ, ಆದರೆ ಅದು ಪರೀಕ್ಷೆಯ ಅಂಕಗಳಿಗೆ ಕಡ್ಡಾಯವಾಗಬಾರದು ಎಂದರು.
ಸರ್ಕಾರ ರಾಜ್ಯದಲ್ಲಿ ಡ್ರಗ್ಸ್ ದಂಧೆಯ ವಿರುದ್ಧ ಸಮರ ಸಾರಿದೆ. ಕರ್ನಾಟಕವನ್ನು ಡ್ರಗ್ಸ್ ಮುಕ್ತಗೊಳಿಸುವುದು ನಮ್ಮ ಉದ್ದೇಶ. ಮೈಸೂರಿನಲ್ಲಿ ಡ್ರಗ್ಸ್ ಜಾಲವನ್ನು ಪತ್ತೆಹಚ್ಚಿರುವ ಬಗ್ಗೆ ತಿಳಿದುಬಂದಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಮೈಸೂರಿನಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ಈ ಬಗ್ಗೆ ದೂರುಗಳು ಕೇಳಿಬರುತ್ತಿದ್ದಲ್ಲಿ ಸಂಬಂಧಪಟ್ಟವರಿಂದ ಅಗತ್ಯ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

