ನೋಯ್ಡಾ: ಕೌಟುಂಬಿಕ ಕಲಹ ಮತ್ತು ಆರ್ಥಿಕ ಸಂಕಷ್ಟದಿಂದ ನೊಂದ 28 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ನೋಯ್ಡಾದ ಬಹುಮಹಡಿ ಕಟ್ಟಡದ 43ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ಸಂಭವ್ ಜೈನ್ ಎಂದು ಗುರುತಿಸಲಾಗಿದೆ. ಮಗನ ಅನಾರೋಗ್ಯದ ಚಿಕಿತ್ಸೆಗಾಗಿ ಮಾಡಿಕೊಂಡಿದ್ದ ಸಾಲ ಹಾಗೂ ದಾಂಪತ್ಯ ಜೀವನದಲ್ಲಿನ ಸಮಸ್ಯೆಗಳು ಅವರ ಮೇಲೆ ಒತ್ತಡ ತಂದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೂ ಮುನ್ನ ಸಂಭವ್ ಅವರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಸಂದೇಶವೊಂದನ್ನು ದಾಖಲಿಸಿದ್ದರು ಎನ್ನಲಾಗಿದೆ. ಅದರಲ್ಲಿ ತಮ್ಮ ತೀವ್ರ ಆರ್ಥಿಕ ಸಂಕಷ್ಟದ ಬಗ್ಗೆ ಮಾತನಾಡಿದ್ದರು. ಆದರೆ, ತಮ್ಮ ಸಾವಿಗೆ ನಿರ್ದಿಷ್ಟವಾಗಿ ಯಾರನ್ನೂ ಹೊಣೆ ಮಾಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಭವ್ ಅವರಿಗೆ ಮಗನಿದ್ದು, ಮಗನ ಅನಾರೋಗ್ಯದ ಚಿಕಿತ್ಸೆಗಾಗಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದರ ಜೊತೆಗೆ ಪತ್ನಿಯೊಂದಿಗಿನ ದಾಂಪತ್ಯ ಕಲಹ ಮತ್ತು ವಿಚ್ಛೇದನದ ವಿಚಾರವೂ ಅವರಿಗೆ ಒತ್ತಡ ಉಂಟುಮಾಡಿತ್ತು ಎಂದು ಪೊಲೀಸರು ಹೇಳಿದ್ದಾರೆ. ಸುಮಾರು 140 ಕೆಜಿ ತೂಕ ಹೊಂದಿದ್ದ ಸಂಭವ್, ತಮ್ಮ ತೂಕ ಮತ್ತು ಆರೋಗ್ಯದ ಬಗ್ಗೆಯೂ ಆತಂಕದಲ್ಲಿದ್ದರು ಎನ್ನಲಾಗಿದೆ.
https://x.com/HamzaLone112614/status/2106944787643613278
₹3 ಕೋಟಿ ಜೀವನಾಂಶದ ವದಂತಿ; ಪೊಲೀಸರ ಸ್ಪಷ್ಟನೆ
ಸಂಭವ್ ಸಾವಿನ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ₹3 ಕೋಟಿ ಜೀವನಾಂಶದ ವಿಚಾರ ಭಾರೀ ಚರ್ಚೆಗೆ ಕಾರಣವಾಯಿತು. ಕೇವಲ ಎರಡು ವರ್ಷಗಳ ದಾಂಪತ್ಯದ ಬಳಿಕ ಪತ್ನಿಗೆ ₹3 ಕೋಟಿ ಜೀವನಾಂಶ ನೀಡಬೇಕಾಗಿತ್ತು ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಆದರೆ ಈ ಬಗ್ಗೆ ಪೊಲೀಸರು ಸ್ಪಷ್ಟನೆ ನೀಡಿದ್ದು, ₹3 ಕೋಟಿ ಜೀವನಾಂಶದ ಯಾವುದೇ ಒಪ್ಪಂದ ನಡೆದಿಲ್ಲ ಎಂದು ಹೇಳಿದ್ದಾರೆ. ಪತಿ-ಪತ್ನಿಯ ನಡುವೆ ಒಟ್ಟು ₹15 ಲಕ್ಷಕ್ಕೆ ಇತ್ಯರ್ಥವಾಗಿತ್ತು. ಅದರಲ್ಲಿ ಸಂಭವ್ ಅವರು ಮೊದಲ ಕಂತಾಗಿ ₹7.5 ಲಕ್ಷ ಪಾವತಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವೈವಾಹಿಕ ಕಾನೂನುಗಳ ಬಗ್ಗೆ ಚರ್ಚೆ
ಪೊಲೀಸರ ಈ ಸ್ಪಷ್ಟನೆಯ ನಡುವೆಯೂ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ದೇಶದ ವಿಚ್ಛೇದನ ಮತ್ತು ಜೀವನಾಂಶ ಕಾನೂನುಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
2024ರಲ್ಲಿ ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವನ್ನೂ ಕೆಲವರು ಉಲ್ಲೇಖಿಸಿದ್ದಾರೆ. ವೈವಾಹಿಕ ವಿವಾದಗಳಲ್ಲಿ ಪುರುಷರ ಆರ್ಥಿಕ ಸ್ಥಿತಿ ಮತ್ತು ಮಾನಸಿಕ ಒತ್ತಡವನ್ನೂ ಪರಿಗಣಿಸಬೇಕು ಎಂದು ಕೆಲ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಚ್ಛೇದನ ಪ್ರಕರಣಗಳಲ್ಲಿ ಜೀವನಾಂಶದ ನಿಯಮಗಳನ್ನು ಮತ್ತಷ್ಟು ಸ್ಪಷ್ಟಪಡಿಸಬೇಕು ಎಂಬ ಆಗ್ರಹವೂ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದೆ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ₹3 ಕೋಟಿ ಜೀವನಾಂಶ ನೀಡಬೇಕಾಗಿತ್ತು ಎಂಬ ಆರೋಪವನ್ನು ಪೊಲೀಸರು ಈಗಾಗಲೇ ತಳ್ಳಿಹಾಕಿದ್ದಾರೆ.
ಸದ್ಯ ನೋಯ್ಡಾ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಕುಟುಂಬಸ್ಥರು ಸೇರಿದಂತೆ ಸಂಬಂಧಪಟ್ಟವರಿಂದ ಮಾಹಿತಿ ಪಡೆಯಲಾಗುತ್ತಿದೆ.

