ಬೆಂಗಳೂರು: ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2026ರ ಉದ್ಘಾಟನಾ ಪಂದ್ಯದ ಹಿನ್ನೆಲೆಯಲ್ಲಿ, ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಭರ್ಜರಿ ಸಿಹಿಸುದ್ದಿ ನೀಡಿದೆ. ಪಂದ್ಯ ಮುಗಿದ ನಂತರ ಪ್ರೇಕ್ಷಕರು ಮನೆಗೆ ತಲುಪಲು ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮೆಟ್ರೋ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಿಸಲಾಗಿದೆ.
ಸಮಯ ವಿಸ್ತರಣೆ: ಸಾಮಾನ್ಯವಾಗಿ ರಾತ್ರಿ 11:00ಕ್ಕೆ ಮುಕ್ತಾಯವಾಗುತ್ತಿದ್ದ ಮೆಟ್ರೋ ಸೇವೆ, ಇಂದು ಪಂದ್ಯದ ಪ್ರಯುಕ್ತ ತಡರಾತ್ರಿ 2:00 ಗಂಟೆಯವರೆಗೆ ಲಭ್ಯವಿರುತ್ತದೆ.
ಎಲ್ಲಾ ದಿಕ್ಕುಗಳಿಗೂ ಲಭ್ಯ: ಮೆಜೆಸ್ಟಿಕ್ (ನಾಡಪ್ರಭು ಕೆಂಪೇಗೌಡ ನಿಲ್ದಾಣ) ನಿಲ್ದಾಣದಿಂದ ನಾಲ್ಕೂ ದಿಕ್ಕುಗಳಿಗೆ (ನೇರಳೆ ಮತ್ತು ಹಸಿರು ಮಾರ್ಗ) ಕೊನೆಯ ರೈಲುಗಳು ತಡರಾತ್ರಿ 2 ಗಂಟೆಗೆ ಹೊರಡಲಿವೆ.
ವಿಶೇಷ ಟಿಕೆಟ್ ವ್ಯವಸ್ಥೆ: ಕ್ರೀಡಾಂಗಣದ ಹತ್ತಿರವಿರುವ ಕಬ್ಬನ್ ಪಾರ್ಕ್ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳಲ್ಲಿ ಜನದಟ್ಟಣೆ ತಪ್ಪಿಸಲು ‘ಪೇಪರ್ ಟಿಕೆಟ್’ ವ್ಯವಸ್ಥೆ ಮಾಡಲಾಗಿದೆ.
ಪ್ರಯಾಣಿಕರಿಗೆ ಸಲಹೆ:
ಪೇಪರ್ ಟಿಕೆಟ್: ಪಂದ್ಯ ಮುಗಿದ ನಂತರ ಕ್ಯೂನಲ್ಲಿ ನಿಲ್ಲುವುದನ್ನು ತಪ್ಪಿಸಲು ಮೊದಲೇ ಪೇಪರ್ ಟಿಕೆಟ್‌ಗಳನ್ನು ಖರೀದಿಸಿ ಅಥವಾ ಸ್ಮಾರ್ಟ್ ಕಾರ್ಡ್/QR ಟಿಕೆಟ್ ಬಳಸಿ.
ದರ: ವಿಸ್ತರಿತ ಅವಧಿಯಲ್ಲಿ ಪ್ರಯಾಣಿಸಲು ಪೇಪರ್ ಟಿಕೆಟ್ ದರವನ್ನು ರೂ. 50 (ಯಾವುದೇ ನಿಲ್ದಾಣಕ್ಕಾದರೂ) ಎಂದು ನಿಗದಿಪಡಿಸಲಾಗಿದೆ.
ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2026 ಪಂದ್ಯದ ಪ್ರಯುಕ್ತ ಮೆಟ್ರೋ ಸೇವೆ ವಿಸ್ತರಣೆ
ದಿನಾಂಕ 28ನೇ ಮಾರ್ಚ್ 2026ರಂದು ಬೆಂಗಳೂರಿನಲ್ಲಿ ನಡೆಯಲಿರುವ ಟಾಟಾ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯದ ಪ್ರಯುಕ್ತ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್‌ಸಿಎಲ್) ಪ್ರಯಾಣಿಕರಿಗೆ ಸುಲಭ ಹಾಗೂ ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ಮೆಟ್ರೋ ರೈಲು ಸೇವಾ ಅವಧಿಯನ್ನು ವಿಸ್ತರಿಸಿದೆ.ಪಂದ್ಯದ ದಿನದಂದು, ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆಯನ್ನು ರಾತ್ರಿ 11:00 ಗಂಟೆಯಿಂದ ಮುಂದಿನ ದಿನದ ಮುಂಜಾನೆ 2:00 ಗಂಟೆಯವರೆಗೆ ವಿಸ್ತರಿಸಲಾಗಿದೆ.
ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲುಗಳು ಕೆಳಗಿನ ವೇಳಾಪಟ್ಟಿಯಂತೆ ಹೊರಡಲಿವೆ:
ವೈಟ್ ಫೀಲ್ಡ್ (ಕಾಡುಗೋಡಿ): ಯಿಂದ ರಾತ್ರಿ 12.30ಕ್ಕೆ ಮತ್ತು ಚಲ್ಲಘಟ್ಟ: ದಿಂದ ರಾತ್ರಿ 12.45ಕ್ಕೆ.
ರೇಷ್ಮೆ ಸಂಸ್ಥೆ ಹಾಗೂ ಮಾದಾವರ: ದಿಂದ ರಾತ್ರಿ 12.45ಕ್ಕೆ.
ಬೊಮ್ಮಸಂದ್ರ: ದಿಂದ ರಾತ್ರಿ 01.00ಕ್ಕೆ ಹಾಗೂ ಆರ್.ವಿ. ರಸ್ತೆ: ಯಿಂದ ರಾತ್ರಿ 02.00ಕ್ಕೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್: ನಿಂದ ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 01:30ಕ್ಕೆ ಕೊನೆಯ ರೈಲು ಹೊರಡಲಿದೆ.
ಬಿಎಂಆರ್ ಸಿಎಲ್ ಪ್ರಕಟಣೆ
ಮೆಟ್ರೋ ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸಲು ಐಪಿಎಲ್ ಪಂದ್ಯದ ಟಿಕೆಟ್‌ಗಳಲ್ಲಿ, ನಮ್ಮ ಮೆಟ್ರೋ ಕ್ಯೂಆರ್ ಕೋಡ್ ಎರಡು ಪ್ರಯಾಣಕ್ಕೆ (ಟು-ವೇ ಟ್ರಾವೆಲ್), ಐಪಿಎಲ್ ಟಿಕೆಟ್ ಮೇಲೆಯೇ ಮುದ್ರಿತವಾಗಿರುತ್ತದೆ ಅಥವಾ ಡಿಜಿಟಲ್ ಐಪಿಎಲ್ ಟಿಕೆಟ್‌ಗಳೊಂದಿಗೆ ಲಭ್ಯವಿರುತ್ತದೆ.
ಕಬ್ಬನ್ ರಸ್ತೆ ಭಾಗದಿಂದ ಸ್ಟೇಡಿಯಂಗೆ ಪ್ರವೇಶ/ನಿರ್ಗಮನ ಗೇಟ್‌ಗಳನ್ನು ಬಳಸುವ ಪ್ರೇಕ್ಷಕರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ಬಳಸುವಂತೆ ಹಾಗೂ ಲಿಂಕ್ ರಸ್ತೆ ಭಾಗದಿಂದ ಪ್ರವೇಶ/ನಿರ್ಗಮನ ಗೇಟ್‌ಗಳನ್ನು ಬಳಸುವ ಪ್ರೇಕ್ಷಕರು ಸಮೀಪದಲ್ಲಿರುವ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಳಸುವಂತೆ ಸೂಚಿಸಲಾಗಿದೆ.
ಪಂದ್ಯದ ದಿನದಂದು ಪ್ರೇಕ್ಷಕರಿಗೆ ಅನುಕೂಲವಾಗಲು ಮತ್ತು ನಮ್ಮ ಮೆಟ್ರೋದಲ್ಲಿ ಸುಗಮ ಪ್ರಯಾಣವನ್ನು ಖಚಿತಪಡಿಸಲು, ಬಿಎಂಆರ್‌ಸಿಎಲ್ ಅನೇಕ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿದೆ. ಪಂದ್ಯದ ದಿನಗಳಲ್ಲಿ ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್ ಸೌಲಭ್ಯವನ್ನು ಎರಡು ಚಕ್ರ ವಾಹನಗಳಿಗೆ ರೂ. 30/- ಮತ್ತು ಕಾರುಗಳಿಗೆ ರೂ. 60/- ನಿಗದಿತ ದರದಲ್ಲಿ ಒದಗಿಸಲಾಗುತ್ತದೆ. ಈ ದರವು ಆ ದಿನದ ಮೆಟ್ರೋ ಸೇವೆ ಮುಕ್ತಾಯವಾಗುವವರೆಗೆ ಮಾನ್ಯವಾಗಿರುತ್ತದೆ. (ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಮಾಡಿರುವ ನಿಲ್ದಾಣದ ವಿವರಗಳು ಅನುಬಂಧದಲ್ಲಿ ಲಭ್ಯವಿವೆ).
ಪ್ರೇಕ್ಷಕರು ತಮ್ಮ ವಾಹನಗಳನ್ನು ನಿಗದಿತ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕ್ ಮಾಡಿ, ಮೆಟ್ರೋ ಮೂಲಕ ಸ್ಟೇಡಿಯಂಗೆ ನಡೆದು ಹೋಗಬಹುದಾದ ಅಂತರದಲ್ಲಿರುವ ಕಬ್ಬನ್ ಪಾರ್ಕ್ ಅಥವಾ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣಗಳಿಗೆ ಪ್ರಯಾಣಿಸುವಂತೆ ಸಲಹೆ ನೀಡಲಾಗಿದೆ. ಇದರಿಂದ ಕೇಂದ್ರ ವ್ಯವಹಾರ ಪ್ರದೇಶ (ಸಿಬಿಡಿ) ಹಾಗೂ ಸ್ಟೇಡಿಯಂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆಯಾಗಲು ಸಹಾಯವಾಗುತ್ತದೆ.
ಪ್ರಯಾಣಿಕರು ಸುಗಮ ಸಂಚಾರ, ಸುರಕ್ಷತೆ ಮತ್ತು ಜನಸಂದಣಿಯನ್ನು ತಪ್ಪಿಸಲು ಪೊಲೀಸ್, ಸ್ಟೇಡಿಯಂ ನಿರ್ವಹಣೆ ಮತ್ತು ಬಿಎಂಆರ್‌ಸಿಎಲ್ ಸಿಬ್ಬಂದಿಯ ನಿರ್ದೇಶನಗಳನ್ನು ಅನುಸರಿಸಲು ವಿನಂತಿಸಲಾಗಿದೆ.
ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಯಾವುದೇ ಅನಾಹುತಗಳು ಅಥವಾ ಅಹಿತಕರ ಘಟನೆಗಳನ್ನು ತಡೆಗಟ್ಟುವ ಹಿತದೃಷ್ಟಿಯಿಂದ, ಅಗತ್ಯವಿದ್ದಲ್ಲಿ ಮೆಟ್ರೋ ನಿಲ್ದಾಣಗಳ ಪ್ರವೇಶ ದ್ವಾರಗಳನ್ನು ನಿಯಂತ್ರಿಸುವ ಅಥವಾ ತಾತ್ಕಾಲಿಕವಾಗಿ ಮುಚ್ಚುವ ಹಕ್ಕನ್ನು ಬಿಎಂಆರ್‌ಸಿಎಲ್ ಹೊಂದಿರುತ್ತದೆ.

