ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ತೊಕ್ಕೊಟ್ಟು ಕುತ್ತಾರುಪದವಿನ ಸಲಾತ್ ನಗರದಲ್ಲಿ ಶುಕ್ರವಾರ ಸಂಜೆ ಮಣ್ಣು ತುಂಬಿದ್ದ ಕ್ರೇನ್ ಬಕೆಟ್ ತಲೆ ಮೇಲೆ ಬಿದ್ದು ಕಾರ್ಮಿಕ ಮೃತಪಟ್ಟಿದ್ದಾರೆ.
ಹೊಸ ಬಾವಿಗಾಗಿ ಮಣ್ಣು ತೆಗೆಯುತ್ತಿದ್ದಾಗ ಕ್ರೇನ್ ಕೊಕ್ಕೆಯಿಂದ ಬೇರ್ಪಟ್ಟ ಮಣ್ಣು ತುಂಬಿದ್ದ ಕಬ್ಬಿಣದ ಬಕೆಟ್ 30 ಅಡಿ ಎತ್ತರದಿಂದ ಬಾವಿಯೊಳಗಿದ್ದ ಕಾರ್ಮಿಕನ ತಲೆ ಮೇಲೆ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಮಲ್ಲಾಪುರದ ಜಿ.ಕೆ. ಶಿವಕುಮಾರ್(30) ಮೃತಪಟ್ಟವರು. ಉಳ್ಳಾಲ ತಾಲೂಕು ಕುತ್ತಾರು ಸಲಾತ್ ನಗರದ ಖಾಲಿ ನಿವೇಶನದಲ್ಲಿ ಹೊಸ ಬಾವಿ ತೆಗೆಯುತ್ತಿದ್ದಾಗ ಅವಘಡ ಸಂಭವಿಸಿದೆ. ಶಿವಕುಮಾರ್ ಸೇರಿದಂತೆ ಮೂವರು ಕಾರ್ಮಿಕರು ಮೂವತ್ತು ಅಡಿ ಆಳದ ಬಾವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಕ್ರೇನ್ ಮೂಲಕ ಕಬ್ಬಿಣದ ಬಕೆಟ್ ನಲ್ಲಿ ಮಣ್ಣನ್ನು ಮೇಲಕ್ಕೆ ಎತ್ತುವಾಗ ಕ್ರೇನ್ ಕೊಕ್ಕೆಯಿಂದ ಬೇರ್ಪಟ್ಟ ಬಕೆಟ್ ಶಿವಕುಮಾರ್ ತಲೆ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಬಾವಿಯಿಂದ ಮೇಲಕ್ಕೆತ್ತಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಾರ್ಗ ಮಧ್ಯದಲ್ಲಿಯೇ ಶಿವಕುಮಾರ್ ಮೃತಪಟ್ಟಿದ್ದಾರೆ. ಬಾವಿಯೊಳಗಿದ್ದ ಉಳಿದ ಇಬ್ಬರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಶಿವಕುಮಾರ್ ಅವರಿಗೆ ಪತ್ನಿ, ಮೂರು ವರ್ಷದ ಪುತ್ರ, ಒಂದು ವರ್ಷದ ಹೆಣ್ಣು ಮಗು ಇದ್ದು, ತೊಕ್ಕೊಟ್ಟುವಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

