ಬೆಂಗಳೂರು: ಗೃಹ ಸಚಿವ ಪರಮೇಶ್ವರ್ ಒಡೆತನದ ಸಿದ್ಧಾರ್ಥ್ ಮೆಡಿಕಲ್ ಕಾಲೇಜಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿರುವ ಬೆನ್ನಲ್ಲೆ ಬೆಂಗಳೂರಿನ ಆರ್.ಟಿ.ಒ ಕಚೇರಿ ಹಾಗೂ ಕೋಲಾರ ಆರ್.ಟಿ.ಒ ಕಚೇರಿಗಳಿಗೂ ಬಾಂಬ್ ಬೆದರಿಕೆ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿಯ ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಇಮೇಲ್ ಮೂಲಕ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದರು. ನಮ್ಮ ಸಹೋದರ ಡಾ.ಅಬ್ದುಲ್ಗೆ ಅವಮಾನಮಾಡಿರುವ ಕಾರಣಕ್ಕೆ 15 ಸಿಲಿಂಡರ್ ತುಂಬಿರುವ ಐಇಡಿ ಪ್ಲಾಂಟ್ ಮಾಡಿದ್ದೇವೆ. ಇಸ್ಲಾಮಿಕ್ ಪ್ರಾರ್ಥನಾ ಸಮಯ ಮಧ್ಯಾಹ್ನ 2 ಗಂಟೆಗೆ SSIMST ಉಡಾಯಿಸಲಾಗುವುದು. ನಾವು ಕೇವಲ ಕಟ್ಟಡವನ್ನು ಮಾತ್ರ ನಾಶಮಾಡಲು ಮುಂದಾಗಿದ್ದು, ಹೀಗಾಗಿ ಸಾಧ್ಯವಾದರೆ ಎಲ್ಲಾ ವಿದ್ಯಾರ್ಥಿಗಳನ್ನು ಹೊರಗಡೆ ಕಳಿಸಿ ಎಂದು ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ, ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಶೀಲನೆ ನಡೆಸಿದ್ದಾರೆ.
ಇದರ ಬೆನ್ನಲ್ಲೇ ಬೆಂಗಳೂರಿನ ಆರ್ಟಿಒ ಕಚೇರಿಗೆ ಬಾಂಬ್ ಬೆದರಿಕೆ ಬಂದಿದ್ದು, ಗಾಯತ್ರಿ_ಶಾಬಾಜ್@Hotmail.com ಐಡಿಯಿಂದ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ.
ಯಶವಂತಪುರ, ರಾಜಾಜಿನಗರ, ಕೋರಮಂಗಲ ಸೇರಿ ನಗರದ ಹಲವು ಆರ್ಟಿಒ ಕಚೇರಿಗಳನ್ನು ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಫೋಟಿಸುವುದಾಗಿ ಇ-ಮೇಲ್ ಕಳುಹಿಸಲಾಗಿದೆ. 10 ಬಾಂಬ್ ಸ್ಫೋಟಗೊಳ್ಳುತ್ತದೆ ಎಂದು ದುಷ್ಕರ್ಮಿಗಳು ಎಚ್ಚರಿಸಿದ್ದಾರೆ.
ಬಾಂಬ್ ಬೆದರಿಕೆ ಇ-ಮೇಲ್ ಬಂದಿರುವ ಹಿನ್ನೆಲೆ ಕೋರಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್. ದೀಪಕ್ ಹೆಚ್ಎಸ್ಆರ್ ಲೇಔಟ್ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಆರ್.ಟಿ.ಒ ಕಚೇರಿಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಇದೇ ವೇಳೆ ಅಪರಿಚಿತ ಇ-ಮೇಲ್ ಐಡಿಯಿಂದ ಕೋಲಾರ ಆರ್.ಟಿ.ಒ ಕಚೇರಿಗೂ ಬೆದರಿಕೆ ಸಂದೇಶ ಬಂದಿದೆ. ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ಅಬ್ದುಲ್ ಮೊಹ್ಮದ್ಗೆ ಮತ್ತು ತಮಿಳುನಾಡಿನ ಸಿಎಂ ಎಂ.ಕೆ.ಸ್ಟಾಲಿನ್ ಬೆಂಬಲಿಗರಿಗೆ ಅವಮಾನ ಮಾಡಿರುವ ಕಾರಣ 10 ವಿಷದ ಬಾಂಬ್ಗಳನ್ನು ಸ್ಫೋಟಿಸೋದಾಗಿ ತಿಳಿಸಲಾಗಿದೆ. ಸ್ಥಳಕ್ಕೆ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

