ಹೈದರಾಬಾದ್: ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅವರ ಜನ್ಮದಿನದ ಅಂಗವಾಗಿ ಅವರ ಬಹುನಿರೀಕ್ಷಿತ ಚಿತ್ರ ‘ಪೆಡ್ಡಿ’ಯಿಂದ ಭರ್ಜರಿ ಉಡುಗೊರೆಯೊಂದು ಸಿಕ್ಕಿದೆ. ನಿರ್ದೇಶಕ ಬುಚ್ಚಿ ಬಾಬು ಸನಾ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಪವರ್‌ಫುಲ್ ‘ಪೈಲ್ವಾನ್’ ಲುಕ್ ಶುಕ್ರವಾರ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.
ಈಗಾಗಲೇ ‘ಪೆಡ್ಡಿ’ ಚಿತ್ರದ ಘೋಷಣಾ ವಿಡಿಯೋ ಮತ್ತು ‘ಚಿಕಿರಿ’ ಹಾಡಿನಲ್ಲಿ ರಾಮ್ ಚರಣ್ ಹಳ್ಳಿ ಕ್ರಿಕೆಟಿಗನಾಗಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದರು. ಆದರೆ ಈಗ ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಅವರು ರಗಡ್ ಕುಸ್ತಿಪಟುವಿನ (ಪೈಲ್ವಾನ್) ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ದೈಹಿಕ ಬದಲಾವಣೆ ಮತ್ತು ತೀವ್ರತೆ ಅಭಿಮಾನಿಗಳನ್ನು ಬೆರಗುಗೊಳಿಸಿದೆ. ಕ್ರಿಕೆಟಿಗನಿಂದ ಪೈಲ್ವಾನ್ ಆಗಿ ಬದಲಾಗುವ ಅವರ ಈ ಪಾತ್ರದ ರೂಪಾಂತರವು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಈ ಚಿತ್ರದಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದು, ವಿಶೇಷವಾಗಿ ಸ್ಯಾಂಡಲ್‌ವುಡ್‌ನ ಕರುನಾಡ ಚಕ್ರವರ್ತಿ ಶಿವ ರಾಜ್‌ಕುಮಾರ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿವ್ಯೇಂದು ಶರ್ಮಾ ಮತ್ತು ಜಗಪತಿ ಬಾಬು ಅವರಂತಹ ಘಟಾನುಘಟಿ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ‘ಚಿಕಿರಿ ಚಿಕಿರಿ’ ಮತ್ತು ‘ರೈ ರೈ ರಾ ರಾ’ ಹಾಡುಗಳು ಸೂಪರ್ ಹಿಟ್ ಆಗಿವೆ.
ಮೈತ್ರಿ ಮೂವಿ ಮೇಕರ್ಸ್ ಮತ್ತು ವೃದ್ಧಿ ಸಿನಿಮಾಸ್ ಜಂಟಿಯಾಗಿ ನಿರ್ಮಿಸುತ್ತಿರುವ ‘ಪೆಡ್ಡಿ’, 2026ರ ಏಪ್ರಿಲ್ 30 ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ. ವಿಭಿನ್ನ ಕಥಾಹಂದರ ಮತ್ತು ಅದ್ಭುತ ದೃಶ್ಯ ವೈಭವದೊಂದಿಗೆ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.

