ಕೊಪ್ಪಳ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಜಿ ಉದ್ಘಾಟಿಸಲಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿವೇಶನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಗವಿಮಠದ ಶ್ರೀಗಳಿಗೆ ಆಹ್ವಾನ ನೀಡಿದ್ದು, ಅವರೊಂದಿಗೆ ಮಾತನಾಡುತ್ತೇವೆ. ಶ್ರೀಗಳು ಮೈಸೂರು ದಸರಾ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಗವಿಮಠದ ಶ್ರೀಗಳು ಮೈಸೂರು ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ್ದಾರೆ ಎನ್ನುವ ವದಂತಿ ಹರಿದಾಡಿದೆ. ಇದು ಸತ್ಯಕ್ಕೆ ದೂರವಾಗಿದೆ ಎಂದು ಈ ಬಗ್ಗೆ ಸ್ಪಷ್ಟನೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಈ ಕುರಿತು ಯಾವುದೇ ಗೊಂದಲವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ದಸರಾ ಉದ್ಘಾಟನೆ ತಿರಸ್ಕರಿಸಿದ್ದಾರೆ ಎನ್ನುವ ವದಂತಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ. ಸೆಪ್ಟಂಬರ್ 28ರಂದು ಶ್ರೀಗಳಿಗೆ ಅಧಿಕೃತ ಆಹ್ವಾನ ನೀಡಲಾಗುವುದು. ಗವಿಮಠಕ್ಕೆ ಭೇಟಿ ನೀಡಿ ಅಧಿಕೃತ ಆಹ್ವಾನ ನೀಡಲಿದ್ದು, ಈಗಾಗಲೇ ದಿನಾಂಕ ಖಚಿತಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಶ್ರೀಗಳ ಜೊತೆಗೆ ಮುಖ್ಯಮಂತ್ರಿಗಳು ಮಾತನಾಡಿದ್ದು, ಅವರು ಸಮ್ಮತಿಸಿದ ಬಳಿಕವೇ ದಸರಾ ಉದ್ಘಾಟಕರಾಗಿ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳಿಗೆ ಕಿವಿಗೊಡಬಾರದು ಎಂದು ಸಚಿವರು ತಿಳಿಸಿದ್ದಾರೆ.
ಸೆ.29 ರಂದು ಕೊಪ್ಪಳದಲ್ಲಿ ವಿದ್ಯುತ್ ಗ್ರಾಹಕರ ಸಂವಾದ ಸಭೆ
ಕೊಪ್ಪಳ: ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ವೃತ್ತ ಕಚೇರಿ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಇ.ಎಚ್.ಟಿ/ಎಚ್.ಟಿ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 29 ರಂದು ಬೆಳಿಗ್ಗೆ 11.30 ಗಂಟೆಗೆ ಅಧೀಕ್ಷಕ ಅಭಿಯಂತರರು(ವಿ), ಕಾರ್ಯ ಮತ್ತು ಪಾಲನಾ ವೃತ್ತ ಕಚೇರಿ, ಜೆಸ್ಕಾಂ, ಕೊಪ್ಪಳ P ರವರ ಅಧ್ಯಕ್ಷತೆಯಲ್ಲಿ ಕಾರ್ಯ ಮತ್ತು ಪಾಲನಾ ವೃತ್ತ ಜೆಸ್ಕಾಂ, ಕೊಪ್ಪಳದಲ್ಲಿ ಏರ್ಪಡಿಸಲಾಗಿದೆ.
ಈ ಸಭೆಯಲ್ಲಿ ಎಲ್ಲಾ ಇ.ಎಚ್.ಟಿ/ಎಚ್.ಟಿ ವಿದ್ಯುತ್ ಗ್ರಾಹಕರು ಹಾಜರಾಗಿ ವಿದ್ಯುತ್ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ವೃತ್ತ ಕಚೇರಿಯ ಅಧೀಕ್ಷಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇರಗುತ್ತಿಗೆ ಆಧಾರದ ಖಾಲಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನ
ಬೆಂಗಳೂರು: ಕೃಷಿ ಇಲಾಖೆಯಲ್ಲಿ ಕೇಂದ್ರ ಪುರಸ್ಕೃತ ಆತ್ಮ ಯೋಜನೆಯಡಿ ನೇರಗುತ್ತಿಗೆ ಆಧಾರದ ಮೇಲೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಖಾಲಿ ಇರುವ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು (ಸಂಖ್ಯೆ01) ,ಸಹಾಯಕ ತಾಂತ್ರಿಕ ವ್ಯವಸ್ಥಾಪಕರ (ಸಂಖ್ಯೆ-02), ಕಂಪ್ಯೂಟರ್ ಪ್ರೊಗ್ರಾಮರ್ (ಸಂಖ್ಯೆ-01) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾದೊಂದಿಗೆ (Resume/CV) ಮತ್ತು ಸಂಬಂದಿತ ದಾಖಲಾತಿಗಳನ್ನು ಜಂಟಿ ಕೃಷಿ ನಿರ್ದೇಶಕರ ಕಛೇರಿ, ಕೃಷಿ ಸಂಕೀರ್ಣ, ಎಸ್.ಕರಿಯಪ್ಪ ರಸ್ತೆ, ಬನಶಂಕರಿ, ಬೆಂಗಳೂರು ಇಲ್ಲಿ ಕಛೇರಿಯ ಅವಧಿಯೊಳಗೆ ಅರ್ಜಿಯನ್ನು ಆಕ್ಟೊಬರ್ 12 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-26711594 ಅಥವಾ jdablr14@gamil. Com ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಹಾಗೂ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

