ಬೆಂಗಳೂರು: ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವು ಪ್ರಕರಣ ಆಕಸ್ಮಿಕವಲ್ಲ, ಇದೊಂದು ವ್ಯವಸ್ಥಿತ ಕೊಲೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಬೆಂಗಳೂರಿನ ಹೈ ಗ್ರೌಂಡ್ಸ್ ಪೋಲಿಸ್ ಠಾಣೆಯಲ್ಲಿ ಝೀರೋ ಎಫ್ಐಆರ್ ದಾಖಲಿಸಲಾಗಿದೆ. ಅಜಿತ್ ಪವಾರ್ ಅಳಿಯ ರೋಹಿತ್ ರಾಜೇಂದ್ರ ದೂರು ನೀಡಿದ್ದಾರೆ.
ಜನವರಿ 28ರಂದು ಪುಣೆಯ ಬಾರಾಮತಿಯ ಬಳಿ ವಿಮಾನ ಅಪಘಾತ ಸಂಭವಿಸಿತ್ತು. ಪ್ರಕರಣದಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿ ದೂರು ನೀಡಲಾಗಿದೆ. ಹಾರಾಟದ ಅವಧಿ ಮುಗಿದಿದ್ದರೂ ವಿಮಾನ ಹಾರಾಡಿತ್ತು. ಸುರಕ್ಷಿತ ಮಿತಿ 5000 ಗಂಟೆ ಮುಗಿಯುವ ಹಂತದಲ್ಲಿತ್ತು. ಹೀಗಿದ್ದರೂ ಆ ವಿಮಾನವನ್ನು ವಾಣಿಜ್ಯ ಬಳಕೆಗೆ ಬಳಸಲಾಗಿತ್ತು. ವಿಮಾನದ ದಾಖಲೆಗಳನ್ನು ತಿದ್ದಿ ಹಾರಾಟ ಮಾಡಿಸಲಾಗಿತ್ತು. 8 ಸಾವಿರ ಗಂಟೆಗಳ ಕಾಲ ಹಾರಾಟ ನಡೆಸಿದ್ದರೂ ಅದನ್ನು ಮುಚ್ಚಿಟ್ಟಿದ್ದಾರೆ ಎಂದು ಹೇಳಲಾಗಿದೆ.
ವಿಎಸ್ಆರ್ ವೆಂಚರ್ಸ್ ನಿಯಮಗಳನ್ನು ಗಾಳಿಗೆ ತೂರಿದೆ. ಡಿಜಿಸಿಎ ತನಿಖೆಯಲ್ಲಿ ವಿಮಾನ ಹಾರಾಟಕ್ಕೆ ಯೋಗ್ಯವಾಗಿರಲಿಲ್ಲ. ಆದರೂ ಆ ವಿಮಾನವನ್ನು ಕಾರ್ಯಾಚರಣೆಗೆ ಬಳಸಲಾಗಿತ್ತು. ಅಮೆರಿಕದಲ್ಲಿ ಸೇವೆಯಿಂದ ನಿವೃತ್ತಿಗೊಂಡಿದ್ದ ವಿಮಾನವನ್ನು ಭಾರತಕ್ಕೆ ತಂದು ಬಳಸಿದ್ದರು ಎಂದು ಗಂಭೀರ ಆರೋಪ ಮಾಡಲಾಗಿದೆ.
ಕುಡುಕ ಪೈಲಟ್ ಕೈಗೆ ವಿಮಾನ ನೀಡಿರುವ ಆರೋಪ ಕೇಳಿ ಬಂದಿದೆ. ವಿಮಾನದ ಪೈಲೆಟ್ ಸುಮಿತ್ ಕಪೂರ್ ಈ ಹಿಂದೆಯೂ ಎರಡು ಬಾರಿ ಮದ್ಯಪಾನ ಮಾಡಿ ಸಿಕ್ಕಿಹಾಕಿಕೊಂಡಿದ್ದರು. ಈ ಹಿನ್ನೆಲೆ ಸುಮಿತ್ ಕಪೂರ್ ಅಮಾನತುಗೊಂಡಿದ್ದರು. ಇಂತಹ ಇತಿಹಾಸವಿದ್ದರೂ ಅವರನ್ನೇ ನೇಮಿಸಿದ್ದು ಏಕೆ? ಉಪಮುಖ್ಯಮಂತ್ರಿ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಅವರನ್ನೇ ಪೈಲಟ್ ಆಗಿ ನೇಮಿಸಿದ್ದು ಏಕೆ? ಮೊದಲು ನಿಗದಿಯಾಗಿದ್ದ ಪೈಲಟ್ ಗಳನ್ನು ಬದಲಾವಣೆ ಮಾಡಲಾಗಿದೆ. ಕೊನೆಯ ಕ್ಷಣದಲ್ಲಿ ಪೈಲಟ್ ಬದಲಾವಣೆ ಮಾಡಿದ್ದು ಅನುಮಾನಕ್ಕೆ ಕಾರಣವಾಗಿದೆ. ಕೊನೆ ಕ್ಷಣದಲ್ಲಿ ಸುಮಿತ್ ಕಪೂರ್ ಮತ್ತು ತಂಡವನ್ನು ನೇಮಕ ಮಾಡಲಾಗಿತ್ತು. ಅಜಿತ್ ಪವಾರ್ ಅವರು ರಸ್ತೆಯ ಮೂಲಕ ಹೋಗಬೇಕಿತ್ತು. ಆದರೆ, ದಿಢೀರ್ ವಿಮಾನ ಪ್ರಯಾಣವಾಗಿ ಬದಲಾಗಿದ್ದು ಹೇಗೆ ಎಂದು ಪ್ರಶ್ನಿಸಲಾಗಿದೆ.
ವಿಮಾನ ಪತನಕ್ಕೆ ಮುನ್ನ ಆಘಾತಕಾರಿ ಮೌನವಿತ್ತು. ಅಜಿತ್ ಪವಾರ್ ವಿಮಾನ ಪತನವಾಗುವ ಕೊನೆ ಕ್ಷಣದಲ್ಲಿ ಕೋ ಪೈಲಟ್ ‘ಒ ಶಿಟ್’ ಎಂದು ಕಿರುಚಿದ್ದಾರೆ. ಮುಖ್ಯ ಪೈಲಟ್ ಸುಮಿತ್ ಕಪೂರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪೈಲಟ್ ಅಮಲಿನಲ್ಲಿದ್ದರೋ ಅಥವಾ ಬೇಕಂತ ಸುಮ್ಮನಿದ್ದರೋ? ಹವಾಮಾನ ವರದಿ ನಿರ್ಲಕ್ಷಿಸಿ ಲ್ಯಾಂಡಿಂಗ್ ಗೆ ಪ್ರಯತ್ನಿಸಲಾಗಿದೆ. ಬಾರಾಮತಿ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಕವಿದಿತ್ತು. ಹೀಗಿದ್ದರೂ ಲ್ಯಾಂಡಿಂಗ್ ಗೆ ಪ್ರಯತ್ನಿಸಲಾಗಿದೆ ಎಂದು ಹೇಳಲಾಗಿದೆ.
ಕನಿಷ್ಠ ಐದು ಕಿಲೋಮೀಟರ್ ವಿಸಿಬಿಲಿಟಿ ಇಲ್ಲದಿದ್ದರೂ ಲ್ಯಾಂಡಿಂಗ್ ಗೆ ಅವಕಾಶ ನೀಡಿದ್ದು ಯಾರು? ಟೇಬಲ್ ಟಾಪ್ ರನ್ ವೇ ಆಗಿದ್ದರೂ ಅಪಾಯಕಾರಿ ನಿರ್ಧಾರ ಕೈಗೊಂಡಿದ್ದು ಏಕೆ? ಅಪಾಯಕಾರಿ ನಿರ್ಧಾರ ಕೈಗೊಂಡಿದ್ದರ ಹಿಂದೆ ಯಾರಿದ್ದಾರೆ? ಹೀಗೆ ಹಲವು ಅನುಮಾನಗಳನ್ನು ಉಲ್ಲೇಖಿಸಿ ರೋಹಿತ್ ರಾಜೇಂದ್ರ ದೂರು ನೀಡಿದ್ದಾರೆ. ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಝೀರೋ ಎಫ್ಐಆರ್ ದಾಖಲಿಸಲಾಗಿದೆ.

