HomeLatest Newsಗೃಹಬಳಕೆ ಸಿಲಿಂಡರ್ ಕೊರತೆ ಇಲ್ಲ, ಸ್ವಲ್ಪ ವಿಳಂಬವಾದರೂ ಗ್ರಾಹಕರಲ್ಲಿ ಆತಂಕ ಬೇಡ: ಡಿಸಿ ಸ್ನೇಹಲ್ ಆರ್. 

ಗೃಹಬಳಕೆ ಸಿಲಿಂಡರ್ ಕೊರತೆ ಇಲ್ಲ, ಸ್ವಲ್ಪ ವಿಳಂಬವಾದರೂ ಗ್ರಾಹಕರಲ್ಲಿ ಆತಂಕ ಬೇಡ: ಡಿಸಿ ಸ್ನೇಹಲ್ ಆರ್. 

ಧಾರವಾಡ: ಜಿಲ್ಲೆಯಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್‍ಗಳ ಕೊರತೆ ಇಲ್ಲ. ಬುಕ್ಕಿಂಗ್ ಮಾಡಿದವರಿಗೆ ಎರಡು ಮೂರು ದಿನ ವಿಳಂಬವಾದರೂ ನಿಯಮಾನುಸಾರ ಬುಕ್ಕಿಂಗ್ ಮಾಡಿದ ಎಲ್ಲರಿಗೂ ಗ್ಯಾಸ್ ಸಿಲಿಂಡರ್ ಪೂರೈಸಲಾಗುತ್ತಿದೆ. ಗ್ರಾಹಕರಲ್ಲಿ ಯಾವುದೇ ಆತಂಕ ಬೇಡ. ವದಂತಿಗಳಿಗೆ ಒಳಗಾಗಿ ಅಗತ್ಯವಿಲ್ಲದಿದ್ದರೂ ಅನವಶ್ಯಕವಾಗಿ ಬುಕ್ಕಿಂಗ್ ಮಾಡುವುದರಿಂದ ವಿತರಣೆಗೆ ಕಾರ್ಯಒತ್ತಡ ಉಂಟಾಗುತ್ತದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದ್ದಾರೆ. 

ಅವರು ಇಂದು ಮಧ್ಯಾಹ್ನ ಧಾರವಾಡ ನಗರ ಪ್ರದೇಶದ ಶ್ರೀ ರಾಮ ಎಚ್‍ಪಿ ಗ್ಯಾಸ್ ಏಜನ್ಸಿಗೆ ಅನಿರೀಕ್ಷಿತ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗ್ಯಾಸ್ ಏಜೆನ್ಸಿಯ ಮಾಲೀಕರನ್ನು ಉದ್ದೇಶಿಸಿ ಗ್ಯಾಸ್ ಸಿಲಿಂಡರ್ ವಿತರಣೆ ಮತ್ತು ಹಂಚಿಕೆ ಕುರಿತು ವಿಚಾರಿಸಿದರು.

ತುಂಬಿದ ಗ್ಯಾಸ್ ಸಿಲಿಂಡರ್ ಗಳ ಸರಬರಾಜಿನಲ್ಲಿ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಸಾರ್ವಜನಕರಿಗೆ ಗ್ಯಾಸ್ ವಿತರಣೆಯಲ್ಲಿ ಯಾವುದೇ ತೊಂದರೆಗಳು ಕಂಡುಬಂದಿರುವುದಿಲ್ಲ ಎಂದು ಮಾಲೀಕರು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಧಾರವಾಡ ಜಿಲ್ಲೆಯಲ್ಲಿ ಮಾ.24ರಂದು ಒಟ್ಟು 16,822 ಗೃಹಬಳಕೆ ಸಿಲಿಂಡರ್ ಗಳು ದಾಸ್ತಾನು ಇವೆ. ಪ್ರತಿದಿನ 10,000 ಸಿಲಿಂಡರ್ ಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆಗಳು ಆಗದ ರೀತಿಯಲ್ಲಿ ಜಿಲ್ಲಾಡಳಿತವು ಹಾಗೂ ಆಹಾರ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗಬಾರದೆಂದು ಕೋರಿದೆ.

ಸಾರ್ವಜನಿಕರು ಗೃಹಬಳಕೆ ಸಿಲಿಂಡರ್ ಗಳನ್ನು ವಾಣಿಜ್ಯ ಬಳಕೆಗೆ ಉಪಯೋಗಿಸಬಾರದು. ಅಲ್ಲದೇ ಸಿಲಿಂಡರ್ ಗಳನ್ನು ಅನಧಿಕೃತವಾಗಿ ಸಂಗ್ರಹಿಸಿ ಒಂದು ಸಿಲಿಂಡರ್ ನಿಂದ ಮತ್ತೊಂದು ಸಿಲಿಂಡರ್ ಗೆ ವರ್ಗಾಯಿಸುವುದು Liquefied Petroleum Gas(REGULATION OF SUPPLY AND DISTRUBUTION) Order 2000  ರನ್ವಯ ಅಪರಾಧವಾಗಿರುತ್ತದೆ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ ಅಂತಹ ಅನಧಿಕೃತ ಚಟುವಟಿಕೆ ಕಂಡುಬಂದಲ್ಲಿ ತಮ್ಮ ಕಾರ್ಯವ್ಯಾಪ್ತಿಗೆ ಸಂಬಂಧಿಸಿದ ಆಹಾರ ನಿರೀಕ್ಷಕರಿಗೆ ತುರ್ತಾಗಿ ಮಾಹಿತಿ ನೀಡಲು ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಸಂಬಂಧ ಸರ್ಕಾರವು ಹೊಸ ಮಾರ್ಗಸೂಚಿ ಹೊರಡಿಸಿದೆ. ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಹೊಂದಿರುವ ಫಲಾನುಭವಿಗಳು 45 ದಿನಕ್ಕೊಮ್ಮೆ ಮಾತ್ರ ಸಿಲಿಂಡರ್ ಬುಕ್ ಮಾಡಬಹುದಾಗಿದ್ದು, ಉಜ್ವಲ ಯೋಜನೆಯೇತರರು 25 ದಿನಕ್ಕೊಮ್ಮೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.

ಸಾರ್ವಜನಿಕರು ಯಾವುದೇ ರೀತಿಯ ಗೊಂದಲ ಅಥವಾ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಇಲ್ಲದಿದ್ದರೂ, ಕೆಲವರು ಅನಾವಶ್ಯಕವಾಗಿ ಮುಂಗಡ ಬುಕ್ಕಿಂಗ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಸರಬರಾಜಿನ ಮೇಲಿನ ಒತ್ತಡ ಹೆಚ್ಚಾಗುತ್ತಿದ್ದು, ಇತರ ಗ್ರಾಹಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಅಗತ್ಯವಿರುವಾಗ ಮಾತ್ರ ಗ್ಯಾಸ್ ಬುಕ್ ಮಾಡುವಂತೆ ಜಿಲ್ಲಾಧಿಕಾರಿಗಳು ವಿನಂತಿಸಿದರು.

ಜಿಲ್ಲೆಯ ಗ್ಯಾಸ್ ಸರಬರಾಜು ಸ್ಥಿತಿಗತಿ ಕುರಿತು ಮಾಹಿತಿ ನೀಡಿದ ಅವರು, ಮೊದಲು ಸಾಮಾನ್ಯವಾಗಿ ಪ್ರತಿ ಗ್ಯಾಸ್ ಸಿಲಿಂಡರ್ ಏಜನ್ಸಿ ವಿತರಕರಿಂದ ಪ್ರತಿದಿನ ಸರಾಸರಿ 400 ರಿಂದ 450 ಸಿಲಿಂಡರ್‍ಗಳನ್ನು ವಿತರಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರಮಾಣವು 350 ರಿಂದ 360 ಸಿಲಿಂಡರ್‍ಗಳನ್ನು ವಿತರಿಸಲಾಗುತ್ತಿದೆ. ಈ ಹಿನ್ನೆಲೆ, ಗ್ಯಾಸ್ ಬುಕ್ ಮಾಡಿದ ನಂತರ ವಿತರಣೆ ಆಗಲು 5 ರಿಂದ 6 ದಿನಗಳಷ್ಟು ವಿಳಂಬವಾಗುತ್ತಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು.

  ಗ್ಯಾಸ್ ಬಳಕೆಯನ್ನು ಸಮರ್ಪಕವಾಗಿ ನಿಯಂತ್ರಿಸಲು ಮತ್ತು ಎಲ್ಲರಿಗೂ ಸಮಾನವಾಗಿ ಬೇಡಿಕೆಗೆ ಅನುಗುಣವಾಗಿ ಸಿಲಿಂಡರ್ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮನವಿ ಮಾಡಿದರು.

ಸರ್ಕಾರದ ಹೊಸ ನಿಯಮವು ಗ್ಯಾಸ್ ಸರಬರಾಜಿನಲ್ಲಿ ಸಮತೋಲನ ಕಾಪಾಡುವ ಉದ್ದೇಶದಿಂದ ಜಾರಿಗೆ ತರಲಾಗಿದ್ದು, ಜನರು ಜವಾಬ್ದಾರಿಯುತವಾಗಿ ನಡೆದುಕೊಂಡರೆ ಯಾವುದೇ ರೀತಿಯ ಕೊರತೆ ಉಂಟಾಗುವುದಿಲ್ಲ ಎಂದು ಅವರು ಹೇಳಿದರು.

ಗೃಹಬಳಕೆ ಸಿಲಿಂಡರ್ ದುರಪಯೋಗವಾಗದಂತೆ ಎಚ್ಚರಿಕೆ ವಹಿಸಿ:

ಶ್ರೀ ರಾಮ ಗ್ಯಾಸ್ ಏಜನ್ಸಿ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಮಾತನಾಡಿ, ಗ್ರಾಹಕರಿಗೆ ಸಿಲಿಂಡರ್ ಬಳಕೆಯ ಕುರತು ಸರಿಯಾದ ಮಾಹಿತಿ ನೀಡಬೇಕು. ಮತ್ತು ಗೃಹಬಳಕೆಯ ಸಿಲಿಂಡರ್‍ಗಳು ದುರಪಯೋಗವಾಗದಂತೆ ಎಚ್ಚರಿಕೆ ವಹಿಸಬೇಕು. ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಮೊದಲು ಬುಕ್ಕಿಂಗ್ ಮಾಡಿದವರಿಗೆ ಮೊದಲ ಆದ್ಯತೆ ನೀಡಬೇಕು. ಸಾರ್ವಜನಿಕರಲ್ಲಿ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸಿಬ್ಬಂದಿಗಳಿಗೆ ಸೂಚಿಸಿದರು.

 ಸಿಲಿಂಡರ್ ವಿತರಣೆಯಲ್ಲಿ ಯಾವುದೇ ಉಳಿಕೆ ಮಾಡದೇ ನಿಯಮಾನುಸಾರ ಬುಕ್ಕಿಂಗ್ ಮಾಡಿದ ಎಲ್ಲರಿಗೂ ವಿತರಿಸಬೇಕು. ವಿಳಂಬವಿದ್ದಲ್ಲಿ ಗ್ರಾಹಕರಿಗೆ ತಿಳಿಸಬೇಕು. ಸಕಾಲಕ್ಕೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ಗ್ರಾಹಕರು ಯಾವುದೇ ಗೊಂದಲಗಳಿಗೆ ಒಳಗಾಗದಂತೆ ಮುನ್ನಚ್ಚರಿಕೆ ವಹಿಸಬೇಕೆಂದು ಶ್ರೀ ರಾಮ ಏಜನ್ಸಿಯ ಮಾಲೀಕರಿಗೆ ಮತ್ತು ಸಿಬ್ಬಂದಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಶ್ರೀ ರಾಮ ಏಜನ್ಸಿಯ ಮಾಲೀಕರು ಇದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular