ಬೆಂಗಳೂರು: 2026 -27 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕ ಹುದ್ದೆಗೆ ಷರತ್ತಿಗೆ ಒಳಪಟ್ಟು ಬಡ್ತಿ ನೀಡಲು ಸರ್ಕಾರ ಆದೇಶಿಸಿದೆ.
ಈ ಸಂಬಂಧ ಅರ್ಹ ಶಿಕ್ಷಕರ ಬಡ್ತಿ ಪ್ರಸ್ತಾವನೆಯನ್ನು ಪರಿಶೀಲಿಸಿ ನಿಯಮಾನುಸಾರ ಮುಖ್ಯ ಶಿಕ್ಷಕ ಹುದ್ದೆಗೆ ಬಡ್ತಿ ನೀಡಲು ಜಿಲ್ಲಾ ಹಂತದಲ್ಲಿ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಆದರೆ ವಿಶೇಷ ಚೇತನ ಅಭ್ಯರ್ಥಿಗಳು ಮೀಸಲಾತಿ ಪ್ರಕ್ರಿಯೆ ಇತ್ಯರ್ಥದ ನಂತರ ಹಾಗೂ ಜೇಷ್ಠತಾ ಪಟ್ಟಿ ಅಂತಿಮಗೊಳಿಸಿದ ಮೇಲೆ ಬಡ್ತಿ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.
ಮೇಲಿನ ವಿಷಯದನ್ವಯ 2026-27 ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಶಿಕ್ಷಕರುಗಳಿಗೆ ಮುಖ್ಯ ಶಿಕ್ಷಕರ ವೃಂದಕ್ಕೆ ಸ್ಥಾನಪನ ಬಡ್ತಿ ನೀಡಲು ಉದ್ದೇಶಿಸಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳ ಹೆಚ್ಚುವರಿ ಮುಖ್ಯ ಶಿಕ್ಷಕರ/ಶಿಕ್ಷಕರ 2024 -25 ನೇ ಸಾಲಿನ ಮರುಹೊಂದಾಣಿಕೆ ಪ್ರಕ್ರಿಯೆ ಮತ್ತು ಮುಖ್ಯ ಶಿಕ್ಷಕರುಗಳ ಸಾಮಾನ್ಯ ವರ್ಗಾವಣಾ ಪ್ರಕ್ರಿಯೆ ಈಗಾಗಲೇ ಮುಕ್ತಾಯಗೊಂಡಿರುವುದರಿಂದ ಪ್ರಸ್ತುತ ಲಭ್ಯವಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರ ಖಾಲಿ ಹುದ್ದೆಗಳಿಗೆ ಎದುರಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳ ಅರ್ಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಸಕ್ಷಮೆ ಪ್ರಾಧಿಕಾರಿಗಳಾದ ಆಯಾ ಜಿಲ್ಲಾ ಉಪ ನಿರ್ದೇಶಕರು (ಆಡಳಿತ) ರವರುಗಳ ಹಂತದಲ್ಲಿ ನಿಯಮಾನುಸಾರ ರಾಜ್ಯದಾದ್ಯಂತ ಬಡ್ತಿ ನೀಡುವ ಪ್ರಕ್ರಿಯೆಗೆ ಚಾಲನೆಯನ್ನು ನೀಡಬೇಕಾಗಿದೆ.
2024-25 ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಯಲ್ಲಿ ವರ್ಗಾವಣೆಗೊಂಡ ಶಿಕ್ಷಕರು ದಿನಾಂಕ: 11-11-2025 ರಲ್ಲಿ ಸೂಚಿಸಿರುವಂತೆ ದಿನಾಂಕ: 09-04-2026 ರಂದು ಕರ್ತವ್ಯದಿಂದ ಬಿಡುಗಡೆಗೊಂಡು ದಿನಾಂಕ: 10-04-2026 ರಂದು ವರ್ಗಾವಣೆಗೊಂಡ ಹುದ್ದೆಯ ಕರ್ತವ್ಯಕ್ಕೆ ಹಾಜರಾಗಲು ತಿಳಿಸಲಾಗಿರುತ್ತದೆ.
ಅದರಂತೆ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ಉಲ್ಲೇಖ-1 ರ ಜೇಷ್ಟತಾ ನಿಯಮಾನುಸಾರ ದಿನಾಂಕ:01-01-2026 ರಲ್ಲಿದ್ದಂತೆ ಆಯಾ ವೃಂದವಾರು ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿ, ಸದರಿ ಪಟ್ಟಿಗೆ ಆಕ್ಷೇಪಣೆ/ ಮನವಿ ಸಲ್ಲಿಸಲು ಕಾಲಾವಕಾಶ ನೀಡಬೇಕಿರುತ್ತದೆ. ಸದರಿ ಆಕ್ಷೇಪಣೆ/ಮನವಿಯಲ್ಲಿನ ಅಂಶಗಳನ್ನು ಬಡ್ತಿ ಪ್ರಾಧಿಕಾರಿಗಳು ನಿಯಮಾನುಸಾರ ಪರಿಶೀಲಿಸಿ ನಿಗದಿತ ಅವಧಿಯೊಳಗೆ ಅಂತಿಮ ಜೇಷ್ಟತಾ ಪ್ರಕಟಿಸಿದ ನಂತರದಲ್ಲಿ ಸದರಿ ಜೇಷ್ಟತಾ ಪಟ್ಟಿಗೆ ಅನುಗುಣವಾಗಿ ಬಡ್ತಿಯನ್ನು ನೀಡಬೇಕಾಗುತ್ತದೆ.
ಸದರಿ ಬಡ್ಡಿ ಪ್ರಕ್ರಿಯೆಯನ್ನು 2024-25 ನೇ ಸಾಲಿನಲ್ಲಿ ನಡೆಸಲಾದ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹೊಂದಾಣಿಕೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೀಡಲಾಗಿರುವ ಜಿಲ್ಲಾವಾರು ಮಂಜೂರಾದ ಹುದ್ದೆಗಳು ಹಾಗೂ ಹೀಗೆ ಮಂಜೂರಾದ ಹುದ್ದೆಗಳು ಬಡ್ತಿ ನೀಡುವ ಸಂದರ್ಭದಲ್ಲಿ ಖಾಲಿ/ ಭರ್ತಿಯಾಗಿರುವ ಬಗ್ಗೆ ಪರಿಶೀಲಿಸಿಕೊಂಡು ಲಭ್ಯವಾಗುವ ಹುದ್ದೆಗಳನ್ನು ಮಾತ್ರ ಬಡ್ತಿಗೆ ಪರಿಗಣಿಸಲು ತಿಳಿಸಿದೆ.
ಪ್ರಸ್ತುತ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳಿಗೆ ಮುಖ್ಯ ಶಿಕ್ಷಕರ ವೃಂದಕ್ಕೆ ಸ್ಥಾನಪನ ಬಡ್ತಿ ನೀಡುವ ಸಂಬಂಧ ಉಲ್ಲೇಖ-09 ರಲ್ಲಿನ ಮಾನದಂಡೆಗಳನ್ವಯ ಅರ್ಹ ಶಿಕ್ಷಕರ ಬಡ್ತಿ ಪ್ರಸ್ತಾವನೆಯನ್ನು ಪರಿಶೀಲಿಸೆ ನಿಯಮಾನುಸಾರ ಕೆಳಗೆ ಸೂಚಿಸಲಾದ ನಿಯಮ/ಷರತ್ತುಗಳಂತೆ ಕ್ರಮವಹಿಸಲು ಸೂಚಿಸಿದೆ.
1. ಮುಖ್ಯ ಶಿಕ್ಷಕರ ಹುದ್ದೆಗಳಿಗೆ ಬಡ್ತಿ ನೀಡಲು ಜಿಲ್ಲಾ ಹಂತದಲ್ಲಿ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳತಕ್ಕದ್ದು, ಆದರೆ ಅಂಗವಿಕಲ ಅಭ್ಯರ್ಥಿಗಳ ಮೀಸಲಾತಿ ಪ್ರಕ್ರಿಯೆ ಇತ್ಯರ್ಥದ ನಂತರ ಹಾಗೂ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಿದ ನಂತರದಲ್ಲಿಯೇ ಬಡ್ತಿ ಪ್ರಕ್ರಿಯೆ ಪ್ರಾರಂಭಿಸತಕ್ಕದ್ದು.
2. ಪ್ರಸ್ತುತ 2024-25 ನೇ ಸಾಲಿನಲ್ಲಿ ನಡೆಸಲಾದ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹೊಂದಾಣಿಕೆ ನಂತರದಲ್ಲಿ ವರ್ಗಾವಣಾ ತಂತ್ರಾಂಶದಲ್ಲಿ ಲಭ್ಯವಿರುವ ಖಾಲಿಹುದ್ದೆಗಳ ಮಾಹಿತಿಯಂತೆ ಯಾವುದೇ ಕಾರಣಕ್ಕೂ ಜಿಲ್ಲೆಗೆ ಮಂಜೂರಾದ ಮುಖ್ಯಶಿಕ್ಷಕರ ವೃಂದಬಲದ ಸಂಖ್ಯೆಯ ಮಿತಿಯನ್ನು ಮೀರತಕ್ಕದ್ದಲ್ಲ ಎಂದು ಸ್ಪಷ್ಟಪಡಿಸಿದೆ.
3. ಬಡ್ತಿ ಪ್ರಕ್ರಿಯೆಗೆ ಲಭ್ಯವಾಗುವ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರಾವಣೆ ನಿಯಂತ್ರಣ) ಅಧಿನಿಯಮ 2020 ದಿನಾಂಕ: 27-03-2020 ರ ನಿಯಮ 3 ರ ಉಪನಿಯಮ-2 ರಲ್ಲಿ ಸೂಚನೆಗಳನ್ನುಅನುಸರಿಸತಕ್ಕದ್ದು.
4. ಉಲ್ಲೇಖ-2 ರಲ್ಲಿನ ಸರ್ಕಾರದ ಆದೇಶದಲ್ಲಿ ತಿಳಿಸಿರುವಂತೆ ಷ್ಣತೆಯಲ್ಲಿ ಪರಿಗಣಿಸಬಹುದಾದ ಎದ್ದುಕಾಣುವ ಅಂಗವೈಕಲ್ಯತೆಯನ್ನು ಉಳ್ಳ ನೌಕರರಿಗೆ ಗ್ರೂಪ್ “ಡಿ” ಮತ್ತು “ಸಿ” ವೃಂದಗಳಿಗೆ ನೀಡುವ ಬಡ್ತಿಯಲ್ಲಿ ಶೇಕಡಾ 4ರಷ್ಟು ಮೀಸಲಾತಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಅದರಂತೆ ಅಂತಿಮ ಜೇಷ್ಟತಾ ಪಟ್ಟಿಯಲ್ಲಿ ಅರ್ಹರಿರುವ ಎಲ್ಲಾ ಅಂಗವಿಕಲ ಶಿಕ್ಷಕರು ಸಕ್ಷಮ ಪ್ರಾಧಿಕಾರದಿಂದ ‘ಜಿಲ್ಲಾ ವೈದ್ಯಕೀಯ ಮಂಡಳಿಯ ತ್ರಿಸದಸ್ಯ ಸಮಿತಿಯಿಂದ ಪಡೆದ ಪ್ರಮಾಣ ಪತ್ರವನ್ನು ಅಥವಾ Permanent disability certificate UDID ಅನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು. ನಿಯಮಾನುಸಾರ ಎದ್ದು ಕಾಣುವ ಅಂಗವೈಕಲ್ಯತೆಯ ಪ್ರಮಾಣದ (ಶೇಕಡಾವಾರು) ಬಗ್ಗೆ ಕಡ್ಡಾಯವಾಗಿ ಖಚಿತಪಡಿಸಿಕೊಳ್ಳತಕ್ಕದ್ದು.
5. ಬಡ್ತಿ ಪ್ರಕ್ರಿಯೆಗೆ ಪರಿಗಣಿಸಲಾಗುವ ಶಿಕ್ಷಕರ ಮೂಲ ಸೇವಾಪುಸ್ತಕ/ ಇಇಡಿಎಸ್ ತಂತ್ರಾಂಶದಲ್ಲಿನ ಸೇವಾ ಮಾಹಿತಿಯನ್ವಯ ಗೈರುಹಾಜರಿ/ಅಮಾನತ್ತು/ಶಿಸ್ತುಕ್ರಮ/ನ್ಯಾಯಾಲಯದ ಪ್ರಕರಣಗಳು ಹಾಗೂ ಇತರೆ ವ್ಯತಿರಿಕ್ತ ಷರಾ ಇರುವ ಬಗ್ಗೆ ಬಡ್ತಿ ಪ್ರಾಧಿಕಾರಿಗಳು ಕಡ್ಡಾಯವಾಗಿ ಪರಿಶೀಲಿಸತಕ್ಕದ್ದು.
6. ಒಂದು ವೇಳೆ ಸುಳ್ಳು ದಾಖಲಾತಿ ನೀಡಿ ಬಡ್ತಿ ಪಡೆದಿದಲ್ಲಿ ಅಂತಹಾ ಶಿಕ್ಷಕರನ್ನು ಶಿಸ್ತುಕ್ರಮಕ್ಕೆ ಒಳಪಡಿಸಿ ಅಂತಹಾ ಶಿಕ್ಷಕರಿಗೆ ನೀಡಿರುವ ಬಡ್ಡಿಯನ್ನು ರದ್ದುಪಡಿಸಿ ಕ್ರಮ ಜರುಗಿಸಲಾಗುವುದು.
7. ಅಂಗವೈಕಲ್ಯ ಮೀಸಲಾತಿ ಅನುಷ್ಠಾನ ಕ್ರಮ ಬ್ಯಾಕ್ಲಾಗ್, ಮೀಸಲಾತಿಯ ಬಿಂದು, ರೋಸ್ಟರ್ ಗುರುತಿಸುವಿಕೆ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು.
8. ಪ್ರಸ್ತುತ ದಿನಾಂಕಕ್ಕೆ ಚಾಲ್ತಿಯಲ್ಲಿರುವ ಸರ್ಕಾರದ ಆದೇಶದಲ್ಲಿ ಸೂಚಿಸಲಾಗಿರುವ 100 ಸೈಕಲ್ ರೋಸ್ಟರ್ ಅನ್ನು ಪಾಲಿಸತಕ್ಕದ್ದು.
9. ಬಡ್ತಿ ಪ್ರಕ್ರಿಯೆಯಲ್ಲಿ ಪರಿಗಣಿಸಲಾದ ಅರ್ಹ ಅಂಗವಿಕಲ ಅಭ್ಯರ್ಥಿಗಳಿಗೆ ಜೇಷ್ಟತೆಯ ಆಧಾರದ ಮೇಲೆ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಮೊದಲ ಆಧ್ಯತೆ ನೀಡುವುದು.
10. ಬಡ್ತಿ ಹಾಗೂ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಬಡ್ತಿ ಮುಂದೂಡಲು/ನಿರಾಕರಿಸಲು ಇಚ್ಚಿಸುವ ಶಿಕ್ಷಕರಿಂದ ಕಡ್ಡಾಯವಾಗಿ ಮುಚ್ಚಳಿಕೆ ಪತ್ರ ಪಡೆದುಕೊಳ್ಳುವುದು.
11. ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡುವ ಸಕ್ಷಮ ಪ್ರಾಧಿಕಾರಿ ಜಿಲ್ಲಾ ಉಪನಿರ್ದೇಶಕರೇ ಆಗಿರುವುದರಿಂದ ಜಿಲ್ಲಾ ಹಂತದಲ್ಲಿ ಬಡ್ತಿ ಪ್ರಕ್ರಿಯೆಗೆ ಅಗತ್ಯ ಪೂರ್ವಭಾವಿ ತಯಾರಿಗಳನ್ನು ಮಾಡಿಕೊಂಡು ಯಾವುದೇ ಲೋಪಗಳಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ತಿಳಿಸಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಲೋಪಗಳಾದಲ್ಲಿ ಬಡ್ತಿ ಪ್ರಾಧಿಕಾರಿಯಾದ ಉಪ ನಿರ್ದೆಶಕರು (ಆಡಳಿತ) ಇವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.
ಮೇಲೆ ಸೂಚಿಸಲಾಗಿರುವ ನಿಯಮಗಳು/ ಷರತ್ತುಗಳಂತೆ ಯಾವುದೇ ಲೋಪದೋಷಗಳು ಉಂಟಾಗದಂತೆ ಬಡ್ತಿ ಪ್ರಾಧಿಕಾರಿಗಳಾದ ಜಿಲ್ಲಾ ಉಪ ನಿರ್ದೇಶಕರು ತಮ್ಮ ಹಂತದಲ್ಲೇ ನಿಯಮಾನುಸಾರ ಜೇಷ್ಟತಾ ಪಟ್ಟಿಯನ್ನು, ಬಡ್ತಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳನ್ನು, ಸ್ವೀಕೃತವಾಗುವ ಬಡ್ತಿ ಪ್ರಸ್ತಾವನೆಗಳನ್ನು, ಅಂಗವಿಕಲತೆಯ ನೈಜತೆ ಕುರಿತು ನಿಯಮಾನುಸಾರ ಪರಿಶೀಲಿಸಿ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳಿಗೆ ಮುಖ್ಯ ಶಿಕ್ಷಕರ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡುವ ಪ್ರಕ್ರಿಯೆಯು ಯಾವುದೇ ತೊಂದರೆಯುಂಟಾಗದಂತೆ ಹೆಚ್ಚಿನ ಗಮನಹರಿಸಿ ಸುಗಮವಾಗಿ ನಡೆಸಲು ಸೂಚಿಸಿದೆ.
ಮುಂದುವರೆದು, ಸದರಿ ಪ್ರಕ್ರಿಯೆಯ ಸಂಬಂಧ, ಸಲ್ಲಿಕೆಯಾಗುವ ಯಾವುದೇ ಆಕ್ಷೇಪಣೆ/ಮನವಿ/ ಕುಂದುಕೊರತೆಗಳನ್ನು ಬಡ್ಡಿ ಪ್ರಾಧಿಕಾರಿಗಳಾದ ಜಿಲ್ಲಾ ಉಪನಿರ್ದೇಶಕರ ಹಂತದಲ್ಲಿಯೇ ಇತ್ಯರ್ಥ ಪಡಿಸತಕ್ಕದ್ದು ಹಾಗೂ ಈ ಕುರಿತಂತೆ ಸೂಚನೆ/ಮಾರ್ಗದರ್ಶನಗಳನ್ನು ಆಯಾ ವಿಭಾಗದ ವ್ಯಾಪ್ತಿಯ ಸಹ ನಿರ್ದೇಶಕರಿಂದ ಪಡೆಯಬಹುದಾಗಿರುತ್ತದೆ. ಅನಗತ್ಯವಾಗಿ ಈ ಕಛೇರಿಗೆ ಪತ್ರ ವ್ಯವಹರಿಸಿ ವಿಳಂಬ ನೀತಿಯನ್ನು ಅನುಸರಿಸತಕ್ಕದ್ದಲ್ಲ ಎಂದು ತಿಳಿಸಿದೆ.



