ನಿಮ್ಮ ಜೇಬಿನಲ್ಲಿ ಒಂದು ಕ್ರೆಡಿಟ್ ಕಾರ್ಡ್ ಇದೆಯೇ? ಅಥವಾ ಯಾವುದಾದರೂ ಸಾಲದ ಕಂತು (EMI) ಬಾಕಿ ಉಳಿಸಿಕೊಂಡಿದ್ದೀರಾ? ಹಾಗಿದ್ದರೆ ಈ ವರದಿ ನಿಮ್ಮ ವೃತ್ತಿಜೀವನದ ಮೇಲೆ ದೊಡ್ಡ ಪರಿಣಾಮ ಬೀರಬಹುದು. ಇದುವರೆಗೆ ಕೇವಲ ಸಾಲ ಪಡೆಯಲು ಮಾತ್ರ ಬೇಕಾಗಿದ್ದ ಕ್ರೆಡಿಟ್ ಸ್ಕೋರ್, ಈಗ ಬ್ಯಾಂಕ್ ಉದ್ಯೋಗ ಗಿಟ್ಟಿಸಿಕೊಳ್ಳಲು ಲಕ್ಕಿ ನಂಬರ್ ಆಗಿ ಬದಲಾಗಿದೆ
ಹೌದು, ಇನ್ಮುಂದೆ ಬ್ಯಾಂಕ್ ಅಧಿಕಾರಿಗಳಾಗುವವರ ಆರ್ಥಿಕ ಶಿಸ್ತನ್ನು ಅಳೆಯಲು ಸರ್ಕಾರಿ ಬ್ಯಾಂಕುಗಳು ಅಭ್ಯರ್ಥಿಗಳ ಸಿಬಿಲ್ (CIBIL) ಇತಿಹಾಸಕ್ಕೆ ಗ್ರೀನ್ ಸಿಗ್ನಲ್ ನೀಡಿವೆ. ಈ ಕುರಿತು ಸಂಸತ್ತಿನಲ್ಲಿ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅವರು ನೀಡಿರುವ ಅಪ್ಡೇಟ್ ಇಲ್ಲಿದೆ.
ಹೊಸ ನಿಯಮದ ಮಾಹಿತಿ:
IBPS ಮೂಲಕ ಆಯ್ಕೆಯಾಗಿ ಕೆಲಸಕ್ಕೆ ಸೇರುವ (Joining) ಸಮಯದಲ್ಲಿ ಅಭ್ಯರ್ಥಿಗಳು ‘ಆರೋಗ್ಯಕರ ಕ್ರೆಡಿಟ್ ಇತಿಹಾಸ’ ಹೊಂದಿರಬೇಕು ಎಂಬುದು ಈಗಿನ ಹೊಸ ಟ್ರೆಂಡ್.
ಟೆನ್ಷನ್ ಬೇಡ, ಅರ್ಜಿಗೆ ಅಡ್ಡಿಯಿಲ್ಲ: ನೀವು ಪರೀಕ್ಷೆಗೆ ಅರ್ಜಿ ಹಾಕುವಾಗ ಅಥವಾ ಎಕ್ಸಾಮ್ ಬರೆಯುವಾಗ ಯಾರೂ ನಿಮ್ಮ ಕ್ರೆಡಿಟ್ ಸ್ಕೋರ್ ಕೇಳುವುದಿಲ್ಲ. ಅಂತಿಮವಾಗಿ ಕೆಲಸಕ್ಕೆ ಸೇರುವ ದಿನ ಮಾತ್ರ ನಿಮ್ಮ ಸ್ಕೋರ್ ಕಾರ್ಡ್ ಕ್ಲೀನ್ ಆಗಿರಬೇಕು.
ಫ್ರೆಶರ್ಗಳಿಗೆ ಗುಡ್ ನ್ಯೂಸ್: ಇದುವರೆಗೆ ಯಾವುದೇ ಬ್ಯಾಂಕ್ ಲೋನ್ ಪಡೆಯದ ಅಥವಾ ಕ್ರೆಡಿಟ್ ಹಿಸ್ಟರಿ ಇಲ್ಲದ (Score -1 or 0) ಹೊಸಬರಿಗೆ ಈ ನಿಯಮದಿಂದ ಯಾವುದೇ ತೊಂದರೆಯಿಲ್ಲ.
ಅಭ್ಯರ್ಥಿಗಳು ಮರೆಯಬಾರದ ಸತ್ಯಗಳು:
ಬ್ಯಾಂಕ್ಗಳೇ ಬಾಸ್: ನಿಮ್ಮ ಕ್ರೆಡಿಟ್ ಪ್ರೊಫೈಲ್ ಅನ್ನು ಒಪ್ಪಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಅಂತಿಮ ಪವರ್ ಆಯಾ ಬ್ಯಾಂಕ್ಗಳ ಕೈಲಿದೆ. ಪ್ರತಿ ಬ್ಯಾಂಕ್ ತನ್ನದೇ ಆದ ಪಾಸ್ ಮಾರ್ಕ್ (ಕನಿಷ್ಠ ಸ್ಕೋರ್) ನಿಗದಿಪಡಿಸಬಹುದು.
ಸಾರ್ವಜನಿಕ ಹಣಕ್ಕೆ ಜವಾಬ್ದಾರಿ: ತನ್ನ ಸ್ವಂತ ಸಾಲವನ್ನೇ ತೀರಿಸದ ವ್ಯಕ್ತಿ ಸಾರ್ವಜನಿಕರ ಕೋಟ್ಯಂತರ ಹಣವನ್ನು ಹೇಗೆ ನಿಭಾಯಿಸಬಲ್ಲ? ಎನ್ನುವುದು ಸರ್ಕಾರದ ನೇರ ಪ್ರಶ್ನೆ. ಆರ್ಥಿಕ ಶಿಸ್ತಿಗಾಗಿಯೇ ಈ ಕಠಿಣ ಕ್ರಮ.
ಸಾಲ ಇರುವುದು ಅಪರಾಧವಲ್ಲ: ನಿಮ್ಮ ಹೆಸರಿನಲ್ಲಿ ಎಜುಕೇಶನ್ ಲೋನ್ ಅಥವಾ ಹೋಮ್ ಲೋನ್ ಇದ್ದರೆ ಭಯಪಡಬೇಡಿ. ಆದರೆ, ಅದರ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಿರಬೇಕು ಅಷ್ಟೇ.
ಅಂಕಿ-ಅಂಶಗಳು ಏನು ಹೇಳುತ್ತವೆ?
ವರದಿಗಳ ಪ್ರಕಾರ, ಈ ನಿಯಮದಿಂದ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಬಹಳ ಕಡಿಮೆ. ಕಳೆದ 3 ವರ್ಷಗಳಲ್ಲಿ ಕೇವಲ 20 ಅಭ್ಯರ್ಥಿಗಳ ನೇಮಕಾತಿ ರದ್ದಾಗಿದೆ. ಅಂದರೆ, ಶೇ. 99.98 ರಷ್ಟು ಮಂದಿಗೆ ಈ ನಿಯಮ ತೊಂದರೆ ಕೊಟ್ಟಿಲ್ಲ

