ಕಲ್ಯಾಣ ಕರ್ನಾಟಕದ ಬೀದರ್ ಮತ್ತು ಕಲಬುರಗಿ ಜಿಲ್ಲೆಯ ಜನರಿಗೆ ಮಹತ್ವದ ಸುದ್ದಿಯೊಂದಿದೆ. ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಸಚಿವ ಎಂ.ಬಿ.ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎರಡು ಜಿಲ್ಲೆಗೆ ವಿಮಾನ ಸೇವೆ ಆರಂಭಿಸಲು ಸೂಚನೆ ನೀಡಲಾಗಿದೆ.
ಬೆಂಗಳೂರಿನ ವಿಧಾನಸೌಧದಲ್ಲಿ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಯಿತು. ಸಭೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣ ಪ್ರಕಾಶ್ ಪಾಟೀಲ, ರಹೀಂ ಖಾನ್, ಅನೇಕ ಶಾಸಕರು ಪಾಲ್ಗೊಂಡಿದ್ದರು.
ಸಭೆಯಲ್ಲಿ ಇಂಡಿಗೋ, ಏರ್ ಇಂಡಿಯಾ, ಅಲಯನ್ಸ್ ಏರ್, ಸ್ಟಾರ್ ಏರ್ ಹಾಗೂ ಆಕಾಶ ಏರ್ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಬೀದರ್, ಕಲಬುರಗಿಗೆ ವಿಮಾನ ಕಾರ್ಯಾಚರಣೆಯ ಸಾಧ್ಯತೆಗಳನ್ನು ಪರಿಶೀಲಿಸಲಾಯಿತು.
ಸಚಿವರ ಪೋಸ್ಟ್: ಈ ಸಭೆಯ ಬಳಿಕ ಸಚಿವ ಎಂ.ಬಿ.ಪಾಟೀಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮತ್ತೊಂದು ಬಲವಾದ ಹೆಜ್ಜೆ. ಬೀದರ್, ಕಲಬುರಗಿಗೆ ವಿಮಾನ ಸೇವೆ ಆರಂಭಿಸಲು ಏರ್ ಲೈನ್ಸ್ ಸಂಸ್ಥೆಗಳಿಗೆ ಸೂಚನೆ’ ಎಂದು ಹೇಳಿದ್ದಾರೆ.
2019ರಲ್ಲಿ ಅಭಿವೃದ್ಧಿಪಡಿಸಲ್ಪಟ್ಟ 742 ಎಕರೆ ವ್ಯಾಪ್ತಿಯ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಎಎಐ ನಿರ್ವಹಿಸುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿಮಾನ ಸೇವೆಗಳನ್ನು ಆರಂಭಿಸುವ ಸಾಧ್ಯತೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಬೆಂಗಳೂರು–ಕಲಬುರಗಿ ಮತ್ತು ಬೆಂಗಳೂರು–ಬೀದರ್ ವಿಮಾನ ಸೇವೆಗಳ ಕುರಿತು ಖಚಿತ ಪ್ರಸ್ತಾವನೆ ಹಾಗೂ ವೇಳಾಪಟ್ಟಿಯನ್ನು ಮಾರ್ಚ್ 23ರೊಳಗೆ ಸಲ್ಲಿಸಲು ಸೂಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಹಲವು ವಿಮಾನಯಾನ ಕಂಪನಿಗಳು ಕಲಬುರಗಿ ಮತ್ತು ಬೀದರ್ಗೆ ನೀಡುತ್ತಿದ್ದ ಸೇವೆಯನ್ನು ಸ್ಥಗಿತಗೊಳಿಸಿವೆ. ಎರಡು ಜಿಲ್ಲೆಗಳಲ್ಲಿ ವಿಮಾನ ನಿಲ್ದಾನಗಳಿದ್ದರೂ ಸಹ ವಿಮಾನಗಳ ಹಾರಾಟ ಇಲ್ಲವಾಗಿದೆ.
ಕಲಬುರಗಿ-ಬೆಂಗಳೂರು, ಬೀದರ್-ಬೆಂಗಳೂರು ನಡುವೆ ವಿಮಾನಯಾನ ಮತ್ತೆ ಆರಂಭಿಸಬೇಕು. ವಿವಿಧ ನಗರಕ್ಕೆ ಸಂಪರ್ಕ ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದರು.

