ಚಿತ್ರದುರ್ಗ : ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯಗಳಲ್ಲಿ ಖಾಲಿ ಇರುವ ಅಪರ ಸರ್ಕಾರಿ ವಕೀಲರ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ವಕೀಲರಿಂದ ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 06 ಅರ್ಜಿ ಸಲ್ಲಿಸಲು ಕೊನೆಯ ದಿನ.
ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯಗಳಲ್ಲಿ ಅಪರ ಸರ್ಕಾರಿ ವಕೀಲರ ನೇಮಕಾತಿ ಅವಧಿಯು ಮುಕ್ತಾಯವಾಗುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮ 26(2)ರನ್ವಯ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ನೇಮಕಾತಿ ಮಾಡಲು ಉದ್ದೇಶಿಸಲಾಗಿದೆ.
ಆಸಕ್ತಿವುಳ್ಳ ಹಾಗೂ 07 ವರ್ಷಗಳ ಕಾಲ ವಕೀಲಿ ವೃತ್ತಿಯನ್ನು ಪೂರೈಸಿದ ಅರ್ಹ ವಕೀಲರು ಏಪ್ರಿಲ್ 06ರ ಸಂಜೆ 5.30ರೊಳಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿತ್ರದುರ್ಗ ಇಲ್ಲಿಗೆ ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಲು ತಿಳಿಸಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸದ ವೇಳೆಯಲ್ಲಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆ: ವಿವಿಧ ತರಬೇತಿಗೆ ಅರ್ಜಿ ಆಹ್ವಾನ
ಪ್ರವಾಸೋದ್ಯಮ ಇಲಾಖೆ ವತಿಯಿಂದ ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆ ಅಡಿಯಲ್ಲಿ ಪ್ರವಾಸೋದ್ಯಮ ಆತಿಥ್ಯ ಕ್ಷೇತ್ರದಲ್ಲಿ ಕೌಶಲಾಭಿವೃದ್ಧಿ ತರಬೇತಿ ನೀಡಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಮರು ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 30 ಅರ್ಜಿ ಸಲ್ಲಿಸಲು ಕೊನೆಯ ದಿನ.
10ನೇ ತರಗತಿ ಉತ್ತೀರ್ಣರಾದವರಿಗೆ ಆಹಾರ ಮತ್ತು ಪಾನೀಯಗಳ ವಿತರಣೆ-4 ತಿಂಗಳು ತರಬೇತಿ, 5ನೇ ತರಗತಿ ಉತ್ತೀರ್ಣರಾದವರಿಗೆ ಕೊಠಡಿ ನಿರ್ವಹಣೆ-4 ತಿಂಗಳ ತರಬೇತಿ, 8ನೇ ತರಗತಿ ಉತ್ತೀರ್ಣರಾದವರಿಗೆ ವಿವಿಧ ಆಹಾರ ತಯಾರಕರಿಗೆ 5 ತಿಂಗಳ ತರಬೇತಿ ನೀಡಲಾಗುವುದು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಆತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಮೈಸೂರಿನ ಎಫ್.ಸಿ.ಐ (ಫುಡ್ ಕ್ರಾಫ್ಟ್ ಇನ್ಸ್ಟಿಟ್ಯೂಟ್) ಹಾಗೂ ಬೆಂಗಳೂರಿನ ಐಹೆಚ್ಎಂ (ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜಮೆಂಟ್) ಮೂಲಕ ವಸತಿ ಸಹಿತ ಕಾರ್ಯಕ್ರಮವನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 20 ರಿಂದ 45 ವರ್ಷದೊಳಗಿರಬೇಕು. ತರಬೇತಿಯು 2026ರ ಮೇ 01 ರಂದು ಪ್ರಾರಂಭವಾಗುತ್ತಿರುವುದರಿಂದ ಅರ್ಜಿಯನ್ನು ಇದೇ ಮಾರ್ಚ್ 17 ರಿಂದ 30 ರವರೆಗೆ ಸಹಾಯಕ ನಿರ್ದೇಶಕರು ಕಚೇರಿ, ಪ್ರವಾಸೋದ್ಯಮ ಇಲಾಖೆ, ಕೋಟೆ ಮುಂಭಾಗ, ಚಿತ್ರದುರ್ಗ ಕಚೇರಿಯಿಂದ ಅರ್ಜಿಗಳನ್ನು ವಿತರಿಸಲಾಗುವುದು. ಸೇವಾ ಸಿಂಧೂ ವೆಬ್ಸೈಟ್ sevasindhu.karnataka.gov.in/sevasindhu/English ನಲ್ಲಿಯೂ ಸಹ ಅರ್ಜಿಯನ್ನು ಸಲ್ಲಿಸಬಹುದು.
ತರಬೇತಿ ಪಡೆಯಲು ಆಸಕ್ತ ಇರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ದ್ವಿ-ಪ್ರತಿಯಲ್ಲಿ ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಕೋಟೆ ಮುಂಭಾಗ, ಚಿತ್ರದುರ್ಗ ಕಚೇರಿಗೆ ಸಲ್ಲಿಸಿ, ಮೂಲ ದಾಖಲೆಗಳನ್ನು ಕಚೇರಿಯ ಸಮಯದಲ್ಲಿ (ರಜೆ ದಿನಗಳನ್ನು) ಹೊರತುಪಡಿಸಿ ಪರಿಶೀಲಿಸಿಕೊಳ್ಳಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಚಿತ್ರದುರ್ಗ ರವರ ಕಚೇರಿ ಹಾಗೂ ದೂರವಾಣಿ ಸಂಖ್ಯೆ 08194-234466 ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.

