ಬೆಂಗಳೂರು: ಒಡಿಸ್ಸಾದಿಂದ ಬಂದಿರುವ ನಾಲ್ವರು ಬಿಡದಿಯಲ್ಲಿ ವಾಸ್ತವ್ಯ ಹೂಡಿರುವ ನಮ್ಮ ಪಕ್ಷದ ಶಾಸಕರನ್ನು ಭೇಟಿ ಮಾಡಿ, ಅಡ್ಡಮತದಾನಕ್ಕೆ ತಲಾ 5 ಕೋಟಿ ರೂ. ಹಣದ ಆಮಿಷ ಒಡ್ಡಿದ್ದಾರೆ. ಆದರೆ ನಮ್ಮ ಶಾಸಕರು ಕುದುರೆ ವ್ಯಾಪಾರಕ್ಕೆ ಸಿದ್ಧರಿಲ್ಲ ಎಂದು ಹೇಳಿ ಕಳುಹಿಸಿದ್ದಾರೆಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಒಡಿಸ್ಸಾದಿಂದ ಬಂದಿರುವ ನಾಲ್ಕು ಜನರು ಸ್ಥಳೀಯ ಬ್ಯಾಟರಾಯನಪುರ ನಿವಾಸಿ ಸುರೇಶ್ ಎಂಬಾತನ ಸಹಾಯ ಪಡೆದು ರೂಮ್ ಬುಕ್ ಮಾಡಿಸಿದ್ದಾರೆ. ನಂತರ ನಮ್ಮ ಶಾಸಕರಿಗೆ ಆಮಿಷ ಒಡ್ಡಿದಾಗ ನಮ್ಮ ಪಕ್ಷದ ಎಂಎಲ್ ಎಗಳು ಈ ವಿಚಾರವನ್ನು ನಮ್ಮ ಗಮನಕ್ಕೆ ತಂದಿದ್ದಾರೆ. ಆಮಿಷ ಒಡ್ಡಿದ ನಾಲ್ವರ ಪೈಕಿ ಇಬ್ಬರು ತಪ್ಪಿಸಿಕೊಂಡಿದ್ದು ಮತ್ತಿಬ್ಬರನ್ನು ಹಿಡಿಯಲಾಗಿದೆ. ಅವರು ಇದೇ ಕೆಲಸಕ್ಕೆ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಖಾಲಿ ಚೆಕ್ ತಂದಿದ್ದಾರೆ. ಆ ಮೂಲಕ ಆಪರೇಷನ್ ಕಮಲ ಮಾಡಲಾಗುತ್ತಿದೆ. ಎಐಸಿಸಿ ಕಾರ್ಯದರ್ಶಿಯವರು ಹಾಗೂ ಮಿಕ್ಕ ನಾಯಕರು ಇತರೇ ವಿಚಾರ ತಿಳಿಸಲಿದ್ದಾರೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ವಿಚಾರವಾಗಿ, ಪಕ್ಷದ ಎಂಎಲ್ ಎಗಳು ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡದೆ ಬಿಜೆಪಿ ಅಧ್ಯಕ್ಷರನ್ನು ಭೇಟಿ ಮಾಡಲು ಆಗುತ್ತದೆಯೇ? ಎಂದರು.
ಇನ್ನು ಉಪಚುನಾವಣೆಯ ಬಗ್ಗೆ ಘೋಷಣೆ ಮಾಡಲಿ ಬಿಡಿ, ನಾವು ತಯಾರಾಗಿದ್ದೇವೆ. ನಮಗೆ ಯಾವುದೇ ಅನುಮಾನವಿಲ್ಲ, ಎಲ್ಲಾ ವರದಿ ತರಿಸಿಕೊಂಡಿದ್ದೇವೆ. ಎಲ್ಲಾ ನಾಯಕರ ಜೊತೆ ಚರ್ಚೆ ನಡೆಸಿದ್ದೇವೆ. ನಾವು ಚುನಾವಣೆ ಎದುರಿಸಲು ಸಿದ್ಧರಾಗಿದ್ದೇವೆ ಎಂದರು.
ದಾವಣಗೆರೆ ಟಿಕೆಟ್ ಹಂಚಿಕೆ ಗೊಂದಲ ವಿಚಾರವಾಗಿ, ಎಲ್ಲಿದೆ ಗೊಂದಲ? ಯಾವ ಗೊಂದಲವೂ ಇಲ್ಲ. ಪಕ್ಷ ಏನು ಹೇಳುತ್ತದೆಯೋ ಅದನ್ನು ಒಪ್ಪಿಕೊಳ್ಳುವುದಾಗಿ ಎಲ್ಲಾ ನಾಯಕರು ಹೇಳಿದ್ದಾರೆ ಎಂದರು.
ಆಮಿಷ ಒಡ್ಡಿದವರ ವಿರುದ್ಧ ಖಂಡಿತ ದೂರು ನೀಡಲಾಗುವುದು. ಕಾನೂನು ಮುಂದಿನದನ್ನು ನೋಡಿಕೊಳ್ಳಲಿದೆ ಎಂದು ತಿಳಿಸಿದರು.

