ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಚುನಾವಣಾ ದಿನಾಂಕಗಳನ್ನು ಪ್ರಕಟಿಸಲಾಗಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9ರಿಂದ 29ರವರೆಗೂ ಮತದಾನ ನಡೆಯಲಿದೆ. ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಉಳಿದ ನಾಲ್ಕು ಕಡೆ ಒಂದೇ ಹಂತದಲ್ಲಿ ಮತದಾನವಾಗಲಿದೆ ಎಂದು ತಿಳಿಸಿದರು.
ಅಸ್ಸಾಂ, ಕೇರಳ ಮತ್ತು ಪುದುಚೆರಿಯಲ್ಲಿ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನವಾಗಲಿದೆ. ತಮಿಳುನಾಡಿನಲ್ಲೂ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಬಹಳಷ್ಟು ಜಾಗಗಳು ಹಿಂಸಾಚಾರಗಳಿಗೆ ಸೂಕ್ಷ್ಮವಾಗಿರುವುದರಿಂದ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತದೆ. ಏಪ್ರಿಲ್ 23 ಮತ್ತು 29ರಂದು ಮತದಾನ ನಡೆಯಲಿದೆ. ಎಲ್ಲಾ ರಾಜ್ಯಗಳಲ್ಲಿಯೂ ಮೇ 4ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ್ ಎಂದರು.
ಪಶ್ಚಿಮ ಬಂಗಾಳ: 294 ಕ್ಷೇತ್ರ
ತಮಿಳುನಾಡು: 234 ಕ್ಷೇತ್ರ
ಅಸ್ಸಾಂ: 126 ಕ್ಷೇತ್ರ
ಕೇರಳ: 140 ಕ್ಷೇತ್ರ
ಪುದುಚೆರಿ: 20 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ
ಐದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 824 ಕ್ಷೇತ್ರಗಳಲ್ಲಿ 17.4 ಕೋಟಿ ಮತದಾರರಿದ್ದಾರೆ. 2.19 ಲಕ್ಷ ಪೋಲಿಂಗ್ ಸ್ಟೇಷನ್ಗಳಿವೆ. 25 ಲಕ್ಷ ಮತದಾನ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಇಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

