ಬೆಂಗಳೂರು : ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಯಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಪರಿಣಾಮದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಸದನದಲ್ಲಿ ಮಾಹಿತಿ ನೀಡಿದ್ದಾರೆ.
ನಾವು ಚಾಟ್ ಜಿಪಿಟಿಯಲ್ಲಿ ಕೇಳುವ ಒಂದೊಂದು ಪ್ರಶ್ನೆಯೂ ಪರಿಸರದ ಮೇಲೆ ಅರಿವಿಲ್ಲದ ಪ್ರಭಾವ ಬೀರುತ್ತಿದೆ! ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ನೀರಿನ ದಾಹದ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, “ಚಾಟ್ ಜಿಪಿಟಿಯಲ್ಲಿ ಕೇವಲ 5 ಪ್ರಶ್ನೆಗಳನ್ನು ಕೇಳಿದರೆ ಅದನ್ನು ಪ್ರಕ್ರಿಯೆಗೊಳಿಸುವ ಸರ್ವರ್ಗಳನ್ನು ತಂಪಾಗಿಸಲು ಸುಮಾರು 500 ಮಿಲಿ ಲೀಟರ್ ನೀರು ಬಳಕೆಯಾಗುತ್ತದೆ” ಎಂಬ ಅಚ್ಚರಿಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ರಾಜ್ಯದಲ್ಲಿ ಹೊಸ ‘ಸುಸ್ಥಿರ ಡೇಟಾ ಸೆಂಟರ್ ಪಾಲಿಸಿ’ ರೂಪಿಸುವ ಕುರಿತು ಚರ್ಚಿಸುವ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಡೇಟಾ ಸೆಂಟರ್ಗಳ ಅತಿ ಹೆಚ್ಚು ಸಂಪನ್ಮೂಲ ಬಳಕೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಒಂದು ಮೆಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ಗೆ ಬರೋಬ್ಬರಿ 25 ಮಿಲಿಯನ್ ಲೀಟರ್ ನೀರು ಮತ್ತು ಭಾರಿ ಪ್ರಮಾಣದ ವಿದ್ಯುತ್ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಡೇಟಾ ಸೆಂಟರ್ಗಳನ್ನು ಕರಾವಳಿ ಭಾಗಕ್ಕೆ ಸ್ಥಳಾಂತರಿಸುವ ಸುಳಿವನ್ನು ಸಚಿವರು ನೀಡಿದ್ದಾರೆ.
ಚಾಟ್ ಜಿಪಿಟಿಯಲ್ಲಿ ಕೇವಲ 5 ಪ್ರಶ್ನೆಗಳನ್ನು ಕೇಳಿದರೆ ಸುಮಾರು 500 ಮಿಲಿ ಲೀಟರ್ ನೀರು ವ್ಯಯವಾಗುತ್ತದೆ. ಒಂದು ಮೆಗಾವ್ಯಾಟ್ ಡೇಟಾ ಸೆಂಟರ್ಗೆ 25 ಮಿಲಿಯನ್ ಲೀಟರ್ ನೀರು ಮತ್ತು ಭಾರಿ ಪ್ರಮಾಣದ ವಿದ್ಯುತ್ ಅಗತ್ಯವಿರುತ್ತದೆ.ಇಂತಹ ಬೃಹತ್ ಡೇಟಾ ಸೆಂಟರ್ಗಳನ್ನು ಸರ್ಕಾರವೇ ಸ್ಥಾಪಿಸುವುದು ಕಷ್ಟಕರ. ಆದರೆ, ಖಾಸಗಿಯವರು ಮುಂದೆ ಬಂದರೆ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದರು.ರಾಜ್ಯದ ಹಳೆಯ ಡೇಟಾ ಸೆಂಟರ್ ಪಾಲಿಸಿಯನ್ನು ಪುನರ್ ಪರಿಶೀಲಿಸಿ, ‘ಸುಸ್ಥಿರ ಡೇಟಾ ಸೆಂಟರ್ ಪಾಲಿಸಿ’ ರೂಪಿಸಲು ಸರ್ಕಾರ ಮುಂದಾಗಿದೆ ಎಂದರು.
ಗೂಗಲ್’ನಿಂದ ಉದ್ಯೋಗ ಸೃಷ್ಟಿ: ಆಂಧ್ರಪ್ರದೇಶದಲ್ಲಿ ಗೂಗಲ್ ಕಂಪನಿ 22 ಸಾವಿರ ಕೋಟಿ ರೂ. ಹೂಡಿಕೆ ಮಾಡುತ್ತಿದ್ದು, ಇದರಿಂದ 1,500 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಚಿವರು ತಿಳಿಸಿದರು.ಡೇಟಾ ಸೆಂಟರ್ಗಳ ಪಟ್ಟಿಯಲ್ಲಿ ಬೆಂಗಳೂರು ಪ್ರಸ್ತುತ ದೇಶದಲ್ಲಿ 5ನೇ ಸ್ಥಾನದಲ್ಲಿದೆ.

