ಹೆಣ್ಣು ಮಗುವಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ, 2006 ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ದೂರದೃಷ್ಟಿಯ ಫಲವಾಗಿ ಈ ಮಹತ್ವಾಕಾಂಕ್ಷಿ ಯೋಜನೆ ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಗೆ ಬಂದಿತು. ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಸಬಲರನ್ನಾಗಿ ಮಾಡಲು ಮತ್ತು ಅವರಿಗೆ ವಿಶೇಷ ಉತ್ತೇಜನ ನೀಡಲು ಈ ಯೋಜನೆ ಇಂದಿಗೂ ದಾರಿದೀಪವಾಗಿದೆ
ಹೆಣ್ಣು ಮಗು ಕುಟುಂಬಕ್ಕೆ ಹೊರೆಯಲ್ಲ, ಅವಳು ಮನೆಯ ಬೆಳಗುವ ದೀಪ ಎಂಬ ಆಶಯದೊಂದಿಗೆ ಜಾರಿಗೆ ಬಂದಿದ್ದ ಭಾಗ್ಯಲಕ್ಷ್ಮಿ ಯೋಜನೆ ಈಗ ಫಲಾನುಭವಿಗಳ ಕೈಹಿಡಿಯುತ್ತಿದೆ. ನಿಮ್ಮ ಮಗಳ ಹೆಸರಿನಲ್ಲಿ ಬಾಂಡ್ ಇದೆಯೇ? ಅವಳಿಗೆ 18 ವರ್ಷ ತುಂಬಿದೆಯೇ? ಹಾಗಾದರೆ ಸರ್ಕಾರದಿಂದ ಬರಬೇಕಾದ ₹1 ಲಕ್ಷ ಮೊತ್ತವನ್ನು ಪಡೆಯಲು ಸಮಯ ಬಂದಿದೆ ಹಣ ಪಡೆಯಲು ನೀವು ಏನು ಮಾಡಬೇಕು? ಯಾವ ದಾಖಲೆಗಳು ಬೇಕು? ಇಲ್ಲಿದೆ ಪೂರ್ಣ ಮಾಹಿತಿ.
ಬಾಂಡ್ ಮೆಚ್ಯೂರಿಟಿ ಹಣ ಕೈ ಸೇರಬೇಕಾದರೆ ಈ ನಿಯಮಗಳು ಕಡ್ಡಾಯ:
ವಯೋಮಿತಿ: ಮಗುವಿಗೆ ಕಡ್ಡಾಯವಾಗಿ 18 ವರ್ಷ ತುಂಬಿರಬೇಕು.
ಶಿಕ್ಷಣ: ಮಗು ಕನಿಷ್ಠ 8 ಅಥವಾ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಪೂರೈಸಿರಬೇಕು.
ಬಾಲ್ಯ ವಿವಾಹ ನಿಷೇಧ: 18 ವರ್ಷ ತುಂಬುವ ಮೊದಲು ಮಗುವಿಗೆ ಮದುವೆ ಮಾಡಿರಬಾರದು.
ಬಾಲ ಕಾರ್ಮಿಕ: ಮಗು ಯಾವುದೇ ಕೆಲಸಕ್ಕೆ ಹೋಗದೆ ಶಾಲೆಗೆ ಹೋಗಿರಬೇಕು.
ಅಗತ್ಯವಿರುವ ದಾಖಲೆಗಳ ಚೆಕ್ ಲಿಸ್ಟ್:
ಅರ್ಜಿ ಸಲ್ಲಿಸುವ ಮುನ್ನ ಇವುಗಳನ್ನು ರೆಡಿ ಇಟ್ಟುಕೊಳ್ಳಿ:
ಮೂಲ ಬಾಂಡ್: ಅಸಲಿ ಭಾಗ್ಯಲಕ್ಷ್ಮಿ ಬಾಂಡ್ (ಕಳೆದು ಹೋಗಿದ್ದರೆ ಜೆರಾಕ್ಸ್ ಪ್ರತಿ ಮತ್ತು ಸ್ವಯಂ ಘೋಷಣಾ ಪತ್ರ).
ಆಧಾರ್ ಕಾರ್ಡ್: ಮಗುವಿನ ಆಧಾರ್ ಕಾರ್ಡ್ ಹೆಸರು ಬಾಂಡ್ನಲ್ಲಿರುವಂತೆಯೇ ಇರಬೇಕು.
ಪೋಷಕರ ದಾಖಲೆ: ತಂದೆ-ತಾಯಿಯ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್.
ವ್ಯಾಸಂಗ ಪ್ರಮಾಣಪತ್ರ: ಓದಿದ ಶಾಲೆಯಿಂದ ಪಡೆದ ಸ್ಟಡಿ ಸರ್ಟಿಫಿಕೇಟ್ ಅಥವಾ SSLC ಅಂಕಪಟ್ಟಿ.
ಬ್ಯಾಂಕ್ ಖಾತೆ: ಮಗುವಿನ ಹೆಸರಿನಲ್ಲಿರುವ ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್.
ಫೋಟೋ: ಮಗುವಿನ 3-4 ಪಾಸ್ಪೋರ್ಟ್ ಸೈಜ್ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
ನೀವು ಎರಡು ಸುಲಭ ಮಾರ್ಗಗಳ ಮೂಲಕ ಅರ್ಜಿ ಸಲ್ಲಿಸಬಹುದು:
ಅಂಗನವಾಡಿ ಮೂಲಕ: ನಿಮ್ಮ ಏರಿಯಾದ ಅಂಗನವಾಡಿ ಕಾರ್ಯಕರ್ತೆಯನ್ನು ಸಂಪರ್ಕಿಸಿ ದಾಖಲೆ ನೀಡಿದರೆ, ಅವರು ಸಿಡಿಪಿಒ (CDPO) ಕಚೇರಿಗೆ ಸಲ್ಲಿಸುತ್ತಾರೆ.
ನೇರವಾಗಿ ಸಲ್ಲಿಸುವುದು: ನಿಮ್ಮ ತಾಲೂಕಿನ ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ’ (CDPO) ಕಚೇರಿಗೆ ಭೇಟಿ ನೀಡಿ ‘ಭಾಗ್ಯಲಕ್ಷ್ಮಿ ಮೆಚ್ಯೂರಿಟಿ ಕ್ಲೇಮ್ ಫಾರ್ಮ್’ ಪಡೆದು ಭರ್ತಿ ಮಾಡಿ ಸಲ್ಲಿಸಬಹುದು.
ಹಣ ಯಾವಾಗ ಸಿಗುತ್ತೆ?
ದಾಖಲೆಗಳ ಪರಿಶೀಲನೆ ಮುಗಿದ ನಂತರ, ಸುಮಾರು 1 ರಿಂದ 2 ತಿಂಗಳೊಳಗೆ ಹಣ ನೇರವಾಗಿ ಮಗುವಿನ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಒಂದು ವೇಳೆ ಹಣ ಬರುವುದು ವಿಳಂಬವಾದರೆ ತಕ್ಷಣ ಸಿಡಿಪಿಒ ಕಚೇರಿಯಲ್ಲಿ ವಿಚಾರಿಸಬಹುದು.

