ಬೆಂಗಳೂರು: ರಾಜ್ಯ ಗುತ್ತಿಗೆದಾರರು ಮತ್ತೆ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಬಾಕಿ ಹಣ ಪಾವತಿ ಮಾಡುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಗುತ್ತಿಗೆದಾರರ ಸಂಘ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದೆ.
ಅಭಿವೃದ್ಧಿ ಕಾರ್ಯಗಳಿಗೆ ಅನುದಾವಿಲ್ಲದೇ ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವಾಗ ಬಾಕಿ ಹಣ ಬಿಡುಗಡೆ ಮಾಡುವಂತೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಒತ್ತಾಯಿಸಿದೆ. ಬಾಕಿ ಇರುವ ಹಣ ಬಿಡುಗಡೆ ಮತ್ತು ಇತರೆ ಸಮಸ್ಯೆಗಳ ಕುರಿತು ಮನವಿ ಮಾಡಿದೆ. ಅಲ್ಲದೇ ಈ ಹಿಂದೆ ರಾಜ್ಯ ಸರ್ಕಾರ ನೀಡಿದ್ದ ಅಭಯ, ಭರವಸೆಯನ್ನು ಇದುವರೆಗೂ ಈಡೇರಿಸದಿದ್ದಕ್ಕೆ ಅಸಮಾಧಾನ ಹೊರಹಾಕಿದೆ. ಈ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ. ಪತ್ರದಲ್ಲಿರುವ ಅಂಶಗಳು ಇಲ್ಲಿವೆ.
ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಗಳು ಆಗಿದ್ದ ಸಂದರ್ಭದಲ್ಲಿ ಗುತ್ತಿಗೆದಾರರಿಗೆ ಭರವಸೆ ನೀಡಿದ್ದೀರಿ. ಸರ್ಕಾರ ನಿಮ್ಮ ಜೊತೆ ಸದಾ ಇರುತ್ತದೆ, ನಿಮ್ಮಿಂದ ಈ ಸರ್ಕಾರ ಅಸ್ತಿತ್ವಕ್ಕೆ ಬಂದಿರುತ್ತದೆ ಎಂದಿದ್ದೀರಿ. ಒಂದೇ ಕಂತಿನಲ್ಲಿ ಹಣ ಬಿಡುಗಡೆ ಮತ್ತು ನಿಮ್ಮ ಸಮಸ್ಯೆಗಳನ್ನು ಬಗೆ ಹರಿಸುತ್ತೇವೆಂದು ಆಶ್ವಾಸನೆ ಮತ್ತು ಅಭಯ ಹಸ್ತ ನೀಡಿರುತ್ತೀರಿ. ತಮ್ಮ ಸರ್ಕಾರ ಆಸ್ಥಿತ್ವಕ್ಕೆ ಬಂದು ಸುಮಾರು 3 ವಸಂತಗಳು ಕಳೆದಿರುತ್ತದೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನಮ್ಮ ಗುತ್ತಿಗೆದಾರರ ಸಮುದಾಯಕ್ಕೆ ಯಾವುದೇ ರೀತಿಯ ಸಹಾಯ ಮಾಡಿರುವುದಿಲ್ಲ . ಸಿದ್ದರಾಮಯ್ಯ ಬರೀ ಆಶ್ವಾಸನೆ ನೀಡುತ್ತಾ ಬಂದಿರುತ್ತಾರೆ. ಸಿದ್ದರಾಮಯ್ಯಗೆ ಹಲವಾರು ಪತ್ರ ವವ್ಯಹಾರ ಮತ್ತು ಭೇಟಿ ಮಾಡಿದರು ಸಹ ಯಾವುದೇ ಸ್ಪಂದನೆ ರಾಜ್ಯ ಸಂಘಕ್ಕೆ ಸಿಕ್ಕಿರುವುದಿಲ್ಲ ಎಂದು ಬೇಸರ ಹೊರಹಾಕಿದೆ.
ತಾವುಗಳು ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ದಿನಾಂಕ 30.06.2026 ರಂದು ರಾಜ್ಯ ಸಂಘದ ಪದಾಧಿಕಾರಿಗಳನ್ನು ಕರೆದು ಚರ್ಚಿಸಿದ್ದೀರಿ. ನಮ್ಮ ಹಣವನ್ನು ಎರಡು ತಿಂಗಳ ಒಳಗಾಗಿ ನೀಡುತ್ತೇವೆ ಎಂದು ಹೇಳಿದ್ದೀರಿ. ಅದಕ್ಕೆ ಸಂಬಂದಪಟ್ಟ ಹಣಕಾಸು ವ್ಯವಸ್ಥೆಯನ್ನು ಮಾಡಿಕೊಳ್ಳಲು ಆರ್ಥಿಕ ಇಲಾಖೆಗೆ ತಿಳಿಸಿರುತ್ತೇನೆಂದು ಭರವಸೆ ನೀಡಿರುತ್ತೀರಿ. ತಾವು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಆಯಾ ಸ್ಥಳೀಯ ಸಮಸ್ಯೆಗಳನ್ನು ಬಗೆ ಹರಿಸಲು ಪ್ರಯತ್ನ ನಡೆಸುತ್ತಿದ್ದೀರಿ. ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೂ ಮೂಲ ಕಾರಣಕರ್ತರಾದ ಕರ್ನಾಟಕ ರಾಜ್ಯದ ಗುತ್ತಿಗೆದಾರರನ್ನೇ ಮರೆತಿದ್ದೀರಿ ಎಂದು ಅಸಮಧಾನ ವ್ಯಕ್ತಪಡಿಸಿದೆ.
ತಾವುಗಳು ಎಲ್ಲಾ ಕಡೆ “ನುಡಿದಂತೆ ನಡೆದ ಮುಖ್ಯಮಂತ್ರಿ ಮತ್ತು ಸರ್ಕಾರ” ಎಂದು ಘೋಷಣೆ ಮಾಡುತ್ತಾ ಬಂದಿರುತ್ತೀರಿ. ಇಡೀ ಕರ್ನಾಟಕ ಸುಮಾರು 1,50,000 ಮತ್ತು ಅವಲಂಬಿತರು ತಮ್ಮ ಮೇಲೆ ವಿಶ್ವಾಸ, ನಂಬಿಕೆ – ಇಟ್ಟುಕೊಂಡಿರುತ್ತಾರೆ. ಕರ್ನಾಟಕ ಸರ್ಕಾರದಲ್ಲಿ ಅಭಿವೃದ್ಧಿ ಇಲಾಖೆಗಳಿಂದ ಒಟ್ಟು ಸುಮಾರು 38,000 ಕೋಟಿ ರೂ. ಮೊತ್ತವು ಬಾಕಿ ಇರುತ್ತದೆ. 2021-22ರಿಂದ ಇಲ್ಲಿಯವರೆಗೂ ಗುತ್ತಿಗೆದಾರರ ಬಾಕಿ ಹಣವು ಇಲಾಖೆಗಳಲ್ಲಿ ಬಿಡುಗಡೆಯಾಗಿರುವುದಿಲ್ಲ. ಲೋಕೋಪಯೋಗಿ ಇಲಾಖೆ ಮತ್ತು ಜಿ.ಬಿ.ಎ.(ಬೆಂಗಳೂರು ಮಹಾನಗರ ಪಾಲಿಕೆ)ನಲ್ಲಿ ಹೊರತು ಪಡಿಸಿ ಇತರೇ ಬೇರೆ ಯಾವುದೇ ಇಲಾಖೆಗಳು ಟೆಂಡರ್ ಮತ್ತು ಹಣ ಬಿಡುಗಡೆ ವಿಚಾರದಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ಮುಖ್ಯಮಂತ್ರಿಗಳ ಭರವಸೆ ಪ್ರಕಾರ ಬಾಕಿ ಇರುವ 38,000 ಕೋಟಿ ರೂ. ಮೊತ್ತವನ್ನು ಸರ್ಕಾರ ತುರ್ತಾಗಿ ಬಿಡುಗಡೆ ಮಾಡಲು ಕ್ರಮವಹಿಸುವುದು. ಅಭಿವೃದ್ಧಿ ಇಲಾಖೆಗಳಲ್ಲಿ ಪಾರದರ್ಶಕತೆ ಕಾಪಾಡುತ್ತಿಲ್ಲ. ಆದ್ದರಿಂದ ಇಲಾಖೆಯಲ್ಲಿ ಜೇಷ್ಠತೆ ಕಾಪಾಡಿ, ಅದರ ಪ್ರಕಾರ ಹಣ ಬಿಡುಗಡೆ ಮಾಡಲು ಸೂಕ್ತ ಕ್ರಮ ವಹಿಸುವುದು. Special LOC ಕೊಡುವುದನ್ನು ತಡೆ ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.
2017-18, 2018-19 ವ್ಯಾಟಿ ನಿಂದ ಜಿ.ಎಸ್.ಟಿ. ವ್ಯತ್ಯಾಸದ ಮೊತ್ತ 8% ನ್ನು ತುರ್ತಾಗಿ ನೀಡಲು ಅರ್ಥಿಕ ಇಲಾಖೆಗೆ ಮುಖ್ಯಮಂತ್ರಿಗಳಿಂದ ಶಿಪಾರಸ್ಸು ಮಾಡಿಸಬೇಕು. ಇ-ಸಂಗ್ರಹಣಾ ವೇದಿಕೆಯ ಗುತ್ತಿಗೆ ನಿರ್ವಹಣಾ ಮಾಡ್ಯೂಲ್‌ನಲ್ಲಿ (Contract Management Module) ನಲ್ಲಿ ಕಾಮಗಾರಿಗಳ ಮಾಹಿತಿಯನ್ನು ಅಪ್ ಲೋಡ್ ಮಾಡಿದ ನಂತರವೇ ಖಜಾನೆಯಿಂದ ಹಣ ಬಿಡುಗಡೆ ಮಾಡುವ ಬಗ್ಗೆ ಸರ್ಕಾರದಿಂದ ಆದೇಶ ಮಾಡಿರುವುದನ್ನು ರದ್ದುಪಡಿಸಬೇಕು. ಕರ್ನಾಟಕ ರಾಜ್ಯದ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಶಾಸಕರು ಸ್ಥಳೀಯ ಗುತ್ತಿಗೆದಾರರಿಗೆ ಟೆಂಡರ್ ನೀಡುವ ವಿಚಾರವಾಗಿ ಆದ್ಯತೆ ನೀಡಬೇಕು.
ಹೊರ ಜಿಲ್ಲೆ ಹಾಗೂ ಹೊರ ರಾಜ್ಯ ಗುತ್ತಿಗೆದಾರರಿಗೆ ಪ್ರೋತ್ಸಾಹ ನೀಡಬಾರದು. ಈ ವಿಚಾರವಾಗಿ ಮಾನ್ಯ ಮುಖ್ಯಮಂತ್ರಿಗಳು ತುರ್ತಾಗಿ ಕ್ರಮಕೈಗೊಳ್ಳಲು ಕೋರಲಾಗಿದೆ. ಕರ್ನಾಟಕ ರಾಜ್ಯದ ಗುತ್ತಿಗೆದಾರರು ಕೋವಿಡ್-19 ಸಂದರ್ಭದಿಂದ ಮತ್ತು ಸರ್ಕಾದ ಮಟ್ಟದಲ್ಲಿ ಇರುವ ಅವ್ಯವಸ್ಥೆಯಿಂದ ಸಣ್ಣ ಮತ್ತು ಮದ್ಯಮ ವರ್ಗದ ಗುತ್ತಿಗೆದಾರರಿಗೆ ಇಲ್ಲಿಯವರೆಗೂ ಟೆಂಡರ್ ಕಾಮಗಾರಿಗಳು ಸಿಗುತ್ತಿಲ್ಲ. ಆದ್ದರಿಂದ ಲೈಸನ್ಸ್ ನವೀಕರಿಸಲು, ಕಾಮಗಾರಿ ಮುಂದುವರೆಸಲು ಮನವಿ ಮಾಡಿದೆ.

