ಬೆಂಗಳೂರು: ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳು ಮೊಬೈಲ್ ಫೋನ್ ನಲ್ಲಿ ಸಂಗ್ರಹಿಸಿ ಇಟ್ಟಿರುವುದು ಕೂಡ ಪೋಕ್ಸೋ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಅಪರಾಧವಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮೊಬೈಲ್ ನಲ್ಲಿ ಅಪಾರ ಪ್ರಮಾಣದಲ್ಲಿ ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೋ ಸಂಗ್ರಹಿಸಿದ್ದ ವ್ಯಕ್ತಿಯೊಬ್ಬರ ವಿರುದ್ಧ ಪ್ರೋಕ್ಸೋ ಕಾಯ್ದೆ ಮತ್ತು ಐಟಿ ಕಾಯ್ದೆ ಅಡಿಯಲ್ಲಿ ದಾಖಲಾಗಿದ್ದ ಎಫ್ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದು ಕೋರಿಕೆ ತ್ರಿಶೂರು ಜಿಲ್ಲೆಯ ಚೊಟ್ಟೂರುಪುರ ಕೆಲ್ಲನೂರಿನ ಪಿ.ಜೆ. ಬಿನೋಜ್(38) ಹೈಕೋರ್ಟ್ ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳನ್ನು ಮೊಬೈಲ್ ಫೋನ್ ನಲ್ಲಿ ಸಂಗ್ರಹಿಸಲಾಗಿದೆಯಷ್ಟೇ. ಆದರೆ, ಅದನ್ನು ಯಾರಿಗೂ ಕಳುಹಿಸಿಲ್ಲ. ಹೀಗಾಗಿ ಪೋಕ್ಸೋ ಕಾಯ್ದೆ ಮತ್ತು ಐಟಿ ಕಾಯ್ದೆಯಡಿ ಅಪರಾಧಗಳು ತನಗೆ ಅನ್ವಯವಾಗುವುದಿಲ್ಲ ಎಂಬ ಅರ್ಜಿದಾರನ ವಾದವನ್ನು ತಿರಸ್ಕರಿಸಿದೆ.
ಮಕ್ಕಳ ಅಶ್ಲೀಲ ಚಿತ್ರ ಹಾಗೂ ವಿಡಿಯೋಗಳನ್ನು ಪ್ರಸರಣ ಮಾಡುವುದಷ್ಟೇ ಅಲ್ಲ, ಪ್ರಸಾರವಾಗುವ ಸಾಮರ್ಥ್ಯ ಹೊಂದಿರುವ ಮಕ್ಕಳ ಅಶ್ಲೀಲ ಫೋಟೋ ಹಾಗೂ ವಿಡಿಯೋ ಸಂಗ್ರಹಿಸುವುದು ಕೂಡ ಪೋಕ್ಸೋ ಕಾಯ್ದೆಯ ಸೆಕ್ಷನ್ 15ರ ಅಡಿ ಅಪರಾಧವಾಗುತ್ತದೆ. ಈ ಬಗ್ಗೆ ಸುಪ್ರೀಂಕೋರ್ಟ್ ಸಹ ತೀರ್ಪು ನೀಡಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದ್ದು, ಅರ್ಜಿದಾರನ ವಾದ ತಿರಸ್ಕರಿಸಿದೆ.

