HomeKarnatakaದಾವಣಗೆರೆ ದಕ್ಷಿಣಕ್ಕೆ ಅಚ್ಚರಿಯ ಅಭ್ಯರ್ಥಿ: ಮಾ.7ಕ್ಕೆ ನಿತೀಶ್ ಅಂತಿಮ ತೀರ್ಮಾನ!

ದಾವಣಗೆರೆ ದಕ್ಷಿಣಕ್ಕೆ ಅಚ್ಚರಿಯ ಅಭ್ಯರ್ಥಿ: ಮಾ.7ಕ್ಕೆ ನಿತೀಶ್ ಅಂತಿಮ ತೀರ್ಮಾನ!

ಶಾಮನೂರು ಶಿವಶಂಕರಪ್ಪ ನಿಧನದ ಕಾರಣ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ. ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಬೇಕಿದೆ. ಉಪ ಚುನಾವಣೆಗೆ ಕಾಂಗ್ರೆಸ್ ಟಿಕೆಟ್‌ಗೆ ಭಾರೀ ಪೈಪೋಟಿ ಇದೆ. ಇತ್ತ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಬಗ್ಗೆ ಅಚ್ಚರಿಯ ಮಾಹಿತಿ ಒಂದು ಹೊರಬಂದಿದೆ.

2008 ರಿಂದ ಹಿಡಿದು ಇಲ್ಲಿಯ ತನಕ ನಡೆದ 4 ಚುನಾವಣೆಯಲ್ಲಿಯೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿಲ್ಲ. 4 ಸಲ ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ ಗೆಲ್ಲುವ ಮೂಲಕ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆ ಮಾಡಿದ್ದಾರೆ.

ಶಾಮನೂರು ಶಿವಶಂಕರಪ್ಪ ಅನುಪಸ್ಥಿತಿಯಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಗೆಲ್ಲಲು ಎನ್‌ಡಿಎ ಮೈತ್ರಿಕೂಟ ತಂತ್ರ ರೂಪಿಸಿದೆ. ಇದಕ್ಕಾಗಿ ಅಚ್ಚರಿಯ ಹೆಜ್ಜೆ ಇಡಲು ಮುಂದಾಗಿದ್ದು, ಮುಂದಿನ ವಾರ ಈ ಕುರಿತು ಅಂತಿಮ ತೀರ್ಮಾನವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎನ್‌ಡಿಎ ಅಭ್ಯರ್ಥಿ ಕಣಕ್ಕೆ?; ಸದ್ಯದ ಮಾಹಿತಿ ಪ್ರಕಾರ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಕರ್ನಾಟಕ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಕಣಕ್ಕಿಳಿಯಲಿದ್ದಾರೆ.

ಈ ಕುರಿತು ಪಕ್ಷದ ವರಿಷ್ಠ, ಬಿಹಾರ ಸಿಎಂ ನಿತೀಶ್ ಕುಮಾರ್ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಮಾರ್ಚ್ 7, 8ರಂದು ಮಹಿಮಾ ಪಟೇಲ್ ಪಾಟ್ನಾದಲ್ಲಿ ನಿತೀಶ್ ಕುಂಆರ್ ಭೇಟಿಯಾಗಿ ಈ ಕುರಿತು ಸ್ಪಷ್ಟ ಚಿತ್ರಣವನ್ನು ಪಡೆದುಕೊಂಡು ಬರಲಿದ್ದಾರೆ.

ಮಹಿಮಾ ಪಟೇಲ್ ಮಾಜಿ ಸಿಎಂ ಜೆ.ಹೆಚ್.ಪಟೇಲ್ ಪುತ್ರ. ಜೆಡಿಯು ಪಕ್ಷ ಎನ್‌ಡಿಎ ಮೈತ್ರಿಕೂಟದ ಪ್ರಮುಖವಾದ ಮಿತ್ರಪಕ್ಷವಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಮಹಿಮಾ ಪಟೇಲ್ ಕಣಕ್ಕಿಳಿಸುವುದು ಎನ್‌ಡಿಎ ಮೈತ್ರಿಕೂಟದ ತಂತ್ರ.

ಬಿಜೆಪಿ, ಜೆಡಿಎಸ್ ಮತ್ತು ಜೆಡಿಯು ಮತಗಳು. ಮಹಿಮಾ ಪಟೇಲ್ ಅವರಿಗೆ ಇರುವ ಪ್ರಭಾವ ಬಳಕೆ ಮಾಡಿಕೊಂಡು ದಾವಣಗೆರೆ ದಕ್ಷಿಣ ಗೆಲ್ಲುವುದು ಎನ್‌ಡಿಎ ಮೈತ್ರಿಕೂಟದ ಲೆಕ್ಕಾಚಾರವಾಗಿದೆ. ಆದರೆ ಕರ್ನಾಟಕ ಬಿಜೆಪಿ ಘಟಕ ಇದಕ್ಕೆ ಒಪ್ಪಿಗೆ ನೀಡಲಿದೆಯೇ? ಕಾದು ನೋಡಬೇಕಿದೆ.

ಬಿಜೆಪಿ ಇನ್ನೂ ಉಪ ಚುನಾವಣೆ ಅಭ್ಯರ್ಥಿ ಅಂತಿಮಗೊಳಿಸಿಲ್ಲ. 2024ರ ಲೋಕಸಭೆ ಚುನಾವಣೆ ಬಳಿಕ ದಾವಣಗೆರೆ ಜಿಲ್ಲಾ ಬಿಜೆಪಿ ಬಣಗಳಾಗಿ ವಿಭಾಗವಾಗಿದೆ. ಆದ್ದರಿಂದ ಅಭ್ಯರ್ಥಿ ಆಯ್ಕೆ ಮಾಡುವುದು ಸಹ ಪಕ್ಷಕ್ಕೆ ಸವಾಲಿನ ಕೆಲಸವಾಗಿದೆ.

ಉಪ ಚುನಾವಣೆ ಬಿಜೆಪಿ ಟಿಕೆಟ್‌ಗಾಗಿ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಬಣದಿಂದ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಶ್ರೀನಿವಾಸ್ ದಾಸಕರಿಯಪ್ಪ ಸೇರಿದಂತೆ ಹಲವರ‌ ಹೆಸರುಗಳು ಕೇಳಿ ಬರುತ್ತಿವೆ.

ಮತ್ತೊಂದೆಡೆ, ಹೊನ್ನಾಳಿಯ ಮಾಜಿ ಶಾಸಕ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬಣದಿಂದ ಕಳೆದ ಬಾರಿ ಪರಾಜಿತರಾಗಿದ್ದ ಅಜಯ್ ಕುಮಾರ್​​ಗೆ ಟಿಕೆಟ್ ನೀಡಬೇಕೆಂಬ ಒತ್ತಡವಿದೆ.

ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ದಾವಣಗೆರೆ ದಕ್ಷಿಣ ಬಿಜೆಪಿಗೆ ಸಿಗಲಿದೆ. ಆದ್ದರಿಂದ ಅಭ್ಯರ್ಥಿಯನ್ನು ಪಕ್ಷ ಆಯ್ಕೆ ಮಾಡಬೇಕು. ಎನ್‌ಡಿಎ ಅಭ್ಯರ್ಥಿಯನ್ನು ಅಂತಿಮಗೊಳಿಸಿ ಮಹಿಮಾ ಪಟೇಲ್ ಕಣಕ್ಕಿಳಿಸುವುದು ಚಿಂತನೆಯಾಗಿದ್ದು, ಇದಕ್ಕೆ ಅಂತಿಮ ರೂಪ ಇನ್ನೂ ಸಿಕ್ಕಿಲ್ಲ.

ಕಾಂಗ್ರೆಸ್‌ನಲ್ಲೂ ಟಿಕೆಟ್ ಪೈಪೋಟಿ ಜೋರಾಗಿದೆ. ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ ಕ್ಷೇತ್ರದಲ್ಲಿರುವ ಮುಸ್ಲಿಂ ಸಮುದಾಯದ ನಾಯಕರು ಈ ಬಾರಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದು, ಯಾರಿಗೆ ಟಿಕೆಟ್? ಎಂಬುದು ಇನ್ನೂ ಅಂತಿಮವಾಗಿಲ್ಲ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular