ಲಖನೌ: ಯೋಧನ ಪಾರ್ಥೀವ ಶರೀರವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ಸೇನಾ ಆಂಬುಲೆನ್ಸ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಆಂಬುಲೆನ್ಸ್ ನಲ್ಲಿದ್ದ ನಾಲ್ವರು ಸಾವನ್ನಪ್ಪಿರುವ ಘೋರ ಘಟನೆ ನಡೆದಿದೆ.
ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹುತಾತ್ಮ ಯೋಧ ಸತ್ಯವಾನ್ ಅವರ ಪಾರ್ಥೀವ ಶರೀರವನ್ನು ಚಂಡೀಗಢದಿಂದ ದೇವಾರಿಯಾಗೆ ಸೇನಾ ಆಂಬುಲೆನ್ಸ್ ಮೂಲಕ ಸಾಗಿಸಲಾಗುತ್ತಿತ್ತು. ಈ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ.
ಹುತಾತ್ಮ್,ಯೋಧ ಸತ್ಯವಾನ್ ಪುತ್ರ ಗೌರವ್ ಸಿಂಗ್ (18), ರಾಮ್ ಸುಮುಝ್ (55), ರಂಜನ್ ಸಿಂಗ್ (35) ಹಾಗೂ ಆಂಬುಲೆನ್ಸ್ ಚಾಲಕ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟ್ರೆಕ್ಕಿಂಗ್ ವೇಳೆ ಈಜಲು ಹೋಗಿ ದುರಂತ: ಕಲ್ಲು ಕ್ವಾರಿಯಲ್ಲಿ ಶವವಾಗಿ ಪತ್ತೆಯಾದ ಟೆಕ್ಕಿ
ಜಿಗಣಿ: ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ಹೋಗಿದ್ದ ವೇಳೆ ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ ಟೆಕ್ಕಿ ಶವವಾಗಿ ಪತ್ತೆಯಾಗಿದ್ದಾನೆ.
ಬೆಂಗಳೂರು ಹೊರವಲಯದ ಜಿಗಣಿ ಸಮೀಪದ ಯಲ್ಲಮ್ಮನದೊಡ್ಡಿಯಲ್ಲಿ ಕಲ್ಲು ಕ್ವಾರಿಯಲ್ಲಿ ಟೆಕ್ಕಿ ಶವ ಪತ್ತೆಯಾಗಿದೆ. ವಿನಯ್ ಮೃತ ಟೆಕ್ಕಿ. ಕಳೆದ ಎರದು ದಿನಗಳಿಂದ ನಾಪತ್ತೆಯಾಗಿದ್ದ ವಿನಯ್ ಇದೀಗ ಶವವಾಗಿ ಪತ್ತೆಯಾಗಿದ್ದಾನೆ.
ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಸೇರಿದಂತೆ ಈಶ್ವರ್ ಮಲ್ಪೆ ಮುಳುಗು ತಜ್ಞರ ತಂಡದಿಂದ ಎರಡು ದಿನಗಳಿಂದ ಕಲ್ಲು ಕ್ವಾರಿಯ ನೀರಿನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ನಿರಂತರ ಹುಡುಕಾಟದ ಬಳಿಕ ಕೊನೆಗೂ ಮೃತದೇಹ ಪತ್ತೆಯಾಗಿದೆ.
ಸದ್ಯ ಮೃತದೇಹವನ್ನ ಅತ್ತಿಬೆಲೆಯ ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಂಧ್ರಪ್ರದೇಶ ಮೂಲದ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ವಿನಯ್ ಬೆಂಗಳೂರಿನ ಹಲಸೂರಿನಲ್ಲಿ ವಾಸವಿದ್ದರು. ಗಾಂಧಿ ಜಯಂತಿ ರಜೆ ಹಿನ್ನೆಲೆ ಟ್ರಕ್ಕಿಂಗ್ ಪ್ಲ್ಯಾನ್ ಮಾಡಿದ್ದು, ಬಿಎಲ್‌ಆರ್ ಹೈಕ್ ಎಂಬ ಇನ್ಸ್ಟಾ ಗ್ರೂಪ್ ಮೂಲಕ ಎಂಟು ಜನರ ತಂಡ ಟ್ರೆಕ್ಕಿಂಗ್ ತೆರಳಿದ್ದರು.
ಟ್ರೆಕ್ಕಿಂಗ್ ವೇಳೆ ವಿನಯ್ ಸೇರಿದಂತೆ ಇಡೀ ತಂಡ ಕಲ್ಲು ಕ್ವಾರಿಯಲ್ಲಿ ಈಜಲು ತೆರಳಿತ್ತು. ಕಲ್ಲು ಕ್ವಾರಿಯ ಮೇಲಿನಿಂದ ಯುವಕ-ಯುವತಿಯರ ತಂಡ ನೀರಿಗೆ ಡೈವ್ ಹೊಡೆದು ಮೋಜುಮಸ್ತಿ ಮಾಡಿದ್ದರು. ಈ ವೇಳೆ ಟೆಕ್ಕಿ ವಿನಯ್ ಏಕಾಏಕಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು.
ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸತತ ಶೋಧ ಕಾರ್ಯಾಚರಣೆ ಬಳಿಕ ಇಂದು ವಿನಯ್ ಮೃತದೇಹ ಕಲ್ಲು ಕ್ವಾರಿಯಲ್ಲಿ ಪತ್ತೆಯಾಗಿದೆ.

