ಮಂಗಳೂರು: ಇಸ್ರೇಲ್-ಇರಾನ್ ನಡುವಿನ ಯುದ್ಧದಿಂದಾಗಿ ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿಮಾಅನ ಹಾರಾಟದಲ್ಲಿ ಭಾರಿ ವ್ಯತ್ಯಯವುಂಟಾಗಿದೆ. ಇರಾನ್-ಇಸ್ರೇಲ್ ಯುದ್ಧದಿಂದಾಗಿ ಇರಾನ್ ವಾಯುಪ್ರದೇಶ ತಾತ್ಕಾಲಿಕವಾಗಿ ಮುಚ್ಚಿರುವುದರಿಂದ, ಮಂಗಳೂರು ಹಾಗೂ ಗಲ್ಫ್ ರಾಷ್ಟ್ರಗಳ ನಡುವೆ ಸಂಚರಿಸುವ ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ.
ಕೆಲವು ವಿಮಾನಗಳು ರದ್ದಾಗಿದ್ದರೆ, ಕೆಲವು ಟೇಕಾಫ್ ಬಳಿಕ ವಾಪಸ್ ಮಂಗಳೂರಿಗೆ ಮರಳಿವೆ. ಕೆಲವು ವಿಮಾನಗಳನ್ನು ಬೇರೆ ಕಡೆಗಳಿಗೆ ಡೈವರ್ಟ್ ಮಾಡಲಾಗಿದೆ. ಗಲ್ಫ್ ದೇಶಗಳಿಂದ ಮಂಗಳೂರಿಗೆ ಆಗಮಿಸಬೇಕಿದ್ದ ಹಲವು ವಿಮಾನಗಳೂ ರದ್ದಾಗಿವೆ. ಮಧ್ಯಪ್ರಾಚ್ಯಕ್ಕೆ ನೇರ ಮಾರ್ಗ ಲಭ್ಯವಿಲ್ಲದ ಕಾರಣ ವಿಮಾನಯಾನ ಸಂಸ್ಥೆಗಳು ತಾತ್ಕಾಲಿಕವಾಗಿ ಕೆಲ ಕ್ರಮಗಳನ್ನು ಕೈಗೊಂಡಿವೆ.
ರದ್ದು/ಡೈವರ್ಟ್ ಆದ ವಿಮಾನಗಳು:
ಮಂಗಳೂರಿನಿಂದ ಹೊರಡಬೇಕಿದ್ದ ವಿಮಾನಗಳು
IX 831 (ಮಂಗಳೂರು–ದುಬೈ) – 13:20ಕ್ಕೆ ಹೊರಡಬೇಕಿದ್ದ ವಿಮಾನ ಟೇಕಾಫ್ ಬಳಿಕ ಮಂಗಳೂರಿಗೆ ವಾಪಸ್; ಬಳಿಕ ರದ್ದು. (174 ಪ್ರಯಾಣಿಕರು + 6 ಸಿಬ್ಬಂದಿ ಸುರಕ್ಷಿತ)
IX 847 (ಮಂಗಳೂರು–ದಮ್ಮಾಮ್) – 23:10ಕ್ಕೆ ಹೊರಡಬೇಕಿದ್ದ ವಿಮಾನ ರದ್ದು
IX 813 (ಮಂಗಳೂರು–ದುಬೈ) – 20:15ಕ್ಕೆ ಹೊರಡಬೇಕಿದ್ದ ವಿಮಾನ ರದ್ದು
IX 851 (ಮಂಗಳೂರು–ಕುವೈತ್) – 22:05ಕ್ಕೆ ಹೊರಡಬೇಕಿದ್ದ ವಿಮಾನ ರದ್ದು
IX 815 (ಮಂಗಳೂರು–ಅಬುಧಾಬಿ) – 23:20ಕ್ಕೆ ಹೊರಡಬೇಕಿದ್ದ ವಿಮಾನ ರದ್ದು
6E 1467 (ಮಂಗಳೂರು–ದುಬೈ) – 19:15ಕ್ಕೆ ಹೊರಡಬೇಕಿದ್ದ ವಿಮಾನ ರದ್ದು
IX 821 (ಮಂಗಳೂರು–ದೋಹಾ) – ಮುಂಬೈಗೆ ಡೈವರ್ಟ್
ಮಂಗಳೂರಿಗೆ ಆಗಮಿಸಬೇಕಿದ್ದ ವಿಮಾನಗಳು:
IX 822 (ದೋಹಾ–ಮಂಗಳೂರು) – 20:45 ಆಗಮನ; ರದ್ದು
IX 832 (ದುಬೈ–ಮಂಗಳೂರು) – 22:10 ಆಗಮನ; ರದ್ದು
ದುಬೈನಲ್ಲಿ 50ಕ್ಕೂ ಹೆಚ್ಚು ಕನ್ನಡಿಗರ ಸಂಕಷ್ಟ
ಯುದ್ಧದ ಹಿನ್ನೆಲೆ ವಿಮಾನ ಸಂಚಾರ ಸ್ಥಗಿತಗೊಂಡಿರುವುದರಿಂದ ದುಬೈನಲ್ಲಿ 50ಕ್ಕೂ ಹೆಚ್ಚು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಯ ಪ್ರವಾಸಿಗರು ಫೆಬ್ರವರಿ 23ರಂದು ವಿದೇಶ ಪ್ರವಾಸಕ್ಕೆ ತೆರಳಿದ್ದರು. ವಾಪಸ್ ಬರಲು ಟಿಕೆಟ್ ಬುಕ್ ಮಾಡಿದ್ದರೂ, ಶಾರ್ಜಾ ಮತ್ತು ಅಬುಧಾಬಿ ವಿಮಾನ ನಿಲ್ದಾಣಗಳಲ್ಲಿ ಸಂಚಾರ ಸ್ಥಗಿತಗೊಂಡಿರುವುದರಿಂದ ಅವರು ಹೋಟೆಲ್‌ಗಳಲ್ಲಿಯೇ ಕಾಲಕಳೆಯುವಂತಾಗಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತೋರಣಘಟ್ಟ ಗ್ರಾಮದ 15 ಮಂದಿ ಹಾಗೂ ಬಳ್ಳಾರಿ ಸುತ್ತಮುತ್ತಲಿನ ಹಳ್ಳಿಗಳ 35 ಮಂದಿ ಸೇರಿ ಒಟ್ಟು 50 ಜನರು ದುಬೈನಲ್ಲಿ ಸಿಲುಕಿದ್ದಾರೆ. ಪ್ರವಾಸದಲ್ಲಿ ಹಣ ಖರ್ಚಾಗಿ ಇದೀಗ ತಂಗುವ ವ್ಯವಸ್ಥೆಗೂ ಹಣದ ಕೊರತೆ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಖಾಸಗಿ ಕಟ್ಟಡದಲ್ಲಿ ಒಂದೇ ಕೊಠಡಿಯಲ್ಲಿ ಮೂವರು ತಂಗಿದ್ದು, ದಿನಕ್ಕೆ ಸುಮಾರು 10,000 ರೂಪಾಯಿ ವೆಚ್ಚವಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿದೇಶಾಂಗ ಸಚಿವಾಲಯ ಹಾಗೂ ರಾಜ್ಯ ಸರ್ಕಾರ ತುರ್ತು ನೆರವು ನೀಡಬೇಕು, ಶೀಘ್ರವೇ ಸ್ವದೇಶಕ್ಕೆ ಮರಳುವ ವ್ಯವಸ್ಥೆ ಮಾಡಬೇಕು ಎಂದು ಪ್ರವಾಸಿಗರು ಮನವಿ ಮಾಡಿದ್ದಾರೆ.

