ದಾವಣಗೆರೆ ಜಿಲ್ಲೆಗೆ ಭದ್ರಾ ಡ್ಯಾಂ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣಗೆ ಮನವಿಯೊಂದನ್ನು ಸಲ್ಲಿಕೆ ಮಾಡಲಾಗಿದೆ. ಈ ಮನವಿಯಲ್ಲಿ ಹಲವು ವಿಚಾರಗಳನ್ನು ಉಲ್ಲೇಖಿಸಲಾಗಿದೆ.
ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಆನಗೋಡು ಗ್ರಾಮದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿ. ಸೋಮಣ್ಣ ಅವರಿಗೆ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮನವಿ ಪತ್ರ ಸಲ್ಲಿಸಿದರು, ಜಲಶಕ್ತಿ ಇಲಾಖೆಗೆ ಸಂಬಂಧಿತೆ ಮನವಿಗಳನ್ನು ಸಲ್ಲಿಸಿದರು.
ಮನವಿಗಳು ಏನು?
- ಭದ್ರಾ ಅಣೆಕಟ್ಟು ದಾವಣಗೆರೆ ಹಾಗೂ ಮಲೇಬೆನ್ನೂರು ಭಾಗಗಳ ರೈತರಿಗೆ ನೀರಾವರಿ ಒದಗಿಸುವ ಪ್ರಮುಖ ಮೂಲವಾಗಿದೆ.
- ದಾವಣಗೆರೆಯ 4 ಹಾಗೂ ಮಲೇಬೆನ್ನೂರಿನ 3 ಉಪವಿಭಾಗಗಳು ಸೇರಿ ಒಟ್ಟು 7 ಉಪವಿಭಾಗಗಳ ಕಾಲುವೆಗಳ ಮೂಲಕ 69,400 ಹೆಕ್ಟೇರ್ (1,71,490 ಎಕರೆ) ಭೂಮಿಗೆ ನೀರಾವರಿ ಸೌಲಭ್ಯ ಲಭ್ಯವಿದೆ.
- ಆದರೆ ಕಾಲುವೆಗಳಲ್ಲಿ ಹೂಳು ಜಮಾವಣೆ, 60 ವರ್ಷ ಹಳೆಯ ಜೀರ್ಣಾವಸ್ಥೆಯಲ್ಲಿರುವ ನೀರು ನಿಯಂತ್ರಣ ನಾಗರಿಕ ಕಾಮಗಾರಿಗಳು, ಸಮರ್ಪಕ ನಿರ್ವಹಣೆಯ ಕೊರತೆ ಇವುಗಳಿಂದ ನೀರಿನ ಸಮರ್ಪಕ ಹಂಚಿಕೆ ಸಾಧ್ಯವಾಗುತ್ತಿಲ್ಲ.
- ಇದರ ಪರಿಣಾಮವಾಗಿ ಕೊನೆಯ ಭಾಗದ ಸುಮಾರು 5,700 ಹೆಕ್ಟೇರ್ (14,086 ಎಕರೆ) ಭೂಮಿಗೆ ನೀರು ತಲುಪುತ್ತಿಲ್ಲ. ವಿಶೇಷವಾಗಿ ಬೇಸಿಗೆ ಅವಧಿಯಲ್ಲಿ ನೀರಿನ ತೀವ್ರ ಕೊರತೆಯಿಂದ ರೈತರು ವರ್ಷಕ್ಕೆ ಒಂದೇ ಬೆಳೆ ಬೆಳೆಯುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
- ಇದರಿಂದ ಗಂಭೀರ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಕಾಲುವೆಗಳಲ್ಲಿ ಹೂಳು ತೆಗೆಯುವ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ.

