ರಾಷ್ಟ್ರ ರಾಜಧಾನಿ ಹೊಸ ದೆಹಲಿಯಲ್ಲಿ ನಡೆದ ವೇದಾಂತ ದೆಹಲಿ ಹಾಫ್ ಮ್ಯಾರಥಾನ್ ಕ್ರೀಡಾಕೂಟದಲ್ಲಿ ಕೀನ್ಯಾದ ಓಟಗಾರ ಚಾರ್ಲ್ಸ್ ಮಟಾಟಾ ಹೊಸ ಇತಿಹಾಸ ಬರೆದಿದ್ದಾರೆ. ಭಾನುವಾರ ಬೆಳಿಗ್ಗೆ ನಡೆದ ಈ ಮ್ಯಾರಥಾನ್ನಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಮತ್ತು ಉತ್ಸಾಹಿಗಳು ಭಾಗವಹಿಸಿದ್ದರು.
ಪುರುಷರ ಎಲೈಟ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಕೀನ್ಯಾದ ಚಾರ್ಲ್ಸ್ ಮಟಾಟಾ ಅವರು 21.097 ಕಿಲೋಮೀಟರ್ ದೂರದ ಓಟವನ್ನು ಕೇವಲ 58 ನಿಮಿಷ 52 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ಹೊಸ ಕೋರ್ಸ್ ರೆಕಾರ್ಡ್ ಸೃಷ್ಟಿಸಿದರು. ಇದರೊಂದಿಗೆ 2020ರಲ್ಲಿ ಇಥಿಯೋಪಿಯಾದ ಅಮೆಡವರ್ಕ್ ವಲೆಲೆಗ್ಡನ್ ಮಾಡಿದ್ದ 58 ನಿಮಿಷ 53 ಸೆಕೆಂಡುಗಳ ದಾಖಲೆಯನ್ನು ಕೇವಲ ಒಂದು ಸೆಕೆಂಡ್ ವ್ಯತ್ಯಾಸದಿಂದ ಮುರಿದರು. ಹೆಚ್ಚಿನ ತೇವಾಂಶ ಹಾಗೂ ಬಿಸಿಲಿನ ನಡುವೆಯೂ ಉತ್ತಮ ಪ್ರದರ್ಶನ ನೀಡಿದ 29 ವರ್ಷದ ಮಟಾಟಾ, ಪ್ರಶಸ್ತಿಯ ಜೊತೆಗೆ ಕೋರ್ಸ್ ರೆಕಾರ್ಡ್ ಬ್ರೇಕ್ ಮಾಡಿದ್ದಕ್ಕಾಗಿ ಹೆಚ್ಚುವರಿ ನಗದು ಬಹುಮಾನವನ್ನೂ ಪಡೆದಿದ್ದಾರೆ.
ಪುರುಷರ ವಿಭಾಗದಲ್ಲಿ ಕೀನ್ಯಾದ ಓಟಗಾರರು ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದು, ಸಮ್ವೆಲ್ ನಮಾಯಿ ಎರಡನೇ ಹಾಗೂ ಸ್ಟಾನ್ಲಿ ವೈಥಾಕಾ ಮೂರನೇ ಸ್ಥಾನ ಪಡೆದರು. ಇನ್ನು ಮಹಿಳೆಯರ ಎಲೈಟ್ ವಿಭಾಗದಲ್ಲಿ ಇಥಿಯೋಪಿಯಾದ ವುಡಿನೆಶ್ ಅಲೆಮು 1 ಗಂಟೆ 6 ನಿಮಿಷ 35 ಸೆಕೆಂಡುಗಳಲ್ಲಿ ಗುರಿ ತಲುಪಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಕೀನ್ಯಾದ ಸೆಲಾ ಮತ್ತು ಸಿಂಥಿಯಾ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದರು.
ಭಾರತೀಯರ ವಿಭಾಗದಲ್ಲಿ ಶೈಲೇಶ್ ಕುಶ್ವಾಹ ಪುರುಷರ ವಿಭಾಗದಲ್ಲಿ 1 ಗಂಟೆ 5 ನಿಮಿಷ 5 ಸೆಕೆಂಡುಗಳಲ್ಲಿ ಮೊದಲ ಸ್ಥಾನ ಗಳಿಸಿದರೆ, ಮಹಿಳೆಯರ ವಿಭಾಗದಲ್ಲಿ ಅಂಕಿತಾ ಧ್ಯಾನ್ 1 ಗಂಟೆ 12 ನಿಮಿಷ 46 ಸೆಕೆಂಡುಗಳಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದರು.

