ತಿರುವನಂತಪುರಂ: ಬಹುನಿರೀಕ್ಷಿತ ಹಾಗೂ ವಿವಾದಿತ ‘ದಿ ಕೇರಳ ಸ್ಟೋರಿ 2’ ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಕೇರಳ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. ಈ ಚಿತ್ರದ ಬಿಡುಗಡೆ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಕೇವಲ ಒಂದು ಸಿನಿಮಾ ಅಲ್ಲ, ಬದಲಾಗಿ ರಾಜ್ಯದ ಜಾತ್ಯತೀತ ಪರಂಪರೆಯನ್ನು ಗುರಿಯಾಗಿಸಿಕೊಂಡು ಹರಡುತ್ತಿರುವ ಸುಳ್ಳು ಪ್ರಚಾರ ಎಂದು ಕಿಡಿಕಾರಿದ್ದಾರೆ.
ಬುಧವಾರ ತಮ್ಮ ಕಚೇರಿಯಿಂದ ಪ್ರಕಟಣೆ ಹೊರಡಿಸಿರುವ ವಿಜಯನ್, ಸಮಾಜದಲ್ಲಿ ದ್ವೇಷ ಮತ್ತು ವಿಭಜನೆಯನ್ನು ಬಿತ್ತಲು ಈ ಚಿತ್ರವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಬಿಡುಗಡೆಯಾದ ಮೊದಲ ಭಾಗವೂ ರಾಜ್ಯದ ವಿರುದ್ಧ ದ್ವೇಷ ಹರಡುವ ಉದ್ದೇಶವನ್ನೇ ಹೊಂದಿತ್ತು. ಈಗ ಅದರ ಮುಂದುವರಿದ ಭಾಗವಾಗಿ ‘ದಿ ಕೇರಳ ಸ್ಟೋರಿ 2’ ಮೂಲಕ ಮತ್ತೊಮ್ಮೆ ಕೇರಳವನ್ನು ಭಯೋತ್ಪಾದನೆಯ ಕೇಂದ್ರವೆಂಬಂತೆ ಚಿತ್ರಿಸಲು ಪ್ರಯತ್ನಿಸಲಾಗುತ್ತಿದೆ. ಇದು ಸಂವಿಧಾನದ ಮೌಲ್ಯಗಳಿಗೆ ಮತ್ತು ಕೋಮು ಸೌಹಾರ್ದತೆಗೆ ದೊಡ್ಡ ಬೆದರಿಕೆ ಎಂದು ಅವರು ತಿಳಿಸಿದ್ದಾರೆ.
ಪರಸ್ಪರ ಒಪ್ಪಿಗೆಯಿಂದ ನಡೆಯುವ ಮದುವೆಗಳನ್ನು ಕೂಡ ಮತಾಂತರ ಮತ್ತು ಕೋಮುವಾದದ ಬಣ್ಣ ಹಚ್ಚಿ ತೋರಿಸುವುದು ಅತ್ಯಂತ ಅಪಾಯಕಾರಿ ಪ್ರವೃತ್ತಿ. ರಾಜ್ಯದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಹಾಳು ಮಾಡುವ ಇಂತಹ ಶಕ್ತಿಗಳು ರಾಜ್ಯದ ಶತ್ರುಗಳು ಎಂದು ಮುಖ್ಯಮಂತ್ರಿಗಳು ಕಟುವಾಗಿ ಟೀಕಿಸಿದ್ದಾರೆ. ಒಂದು ಕಡೆ ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹ ಚಿತ್ರಗಳಿಗೆ ಪ್ರಸಾರಕ್ಕೆ ಅನುಮತಿ ಸಿಗುತ್ತಿದೆ, ಆದರೆ ಆಹಾರ ಸಂಸ್ಕೃತಿಯ ಕುರಿತಾದ ‘ಬೀಫ್’ ನಂತಹ ಚಲನಚಿತ್ರಗಳಿಗೆ ನಿರ್ಬಂಧ ಹೇರಲಾಗುತ್ತಿದೆ ಎಂದು ಅವರು ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ.
ವಿಪುಲ್ ಅಮೃತ್ ಲಾಲ್ ಶಾ ನಿರ್ಮಾಣದ ಈ ಚಿತ್ರವು ಫೆಬ್ರವರಿ 27 ರಂದು ತೆರೆಕಾಣಲು ಸಿದ್ಧವಾಗಿದೆ. ಸತ್ಯ ಘಟನೆಗಳ ಆಧಾರಿತ ಸಿನಿಮಾ ಎಂದು ನಿರ್ಮಾಪಕರು ಹೇಳಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಇದು ಕೇವಲ ಪ್ರಚಾರಕ್ಕಾಗಿ ಸೃಷ್ಟಿಸಲಾದ ಕಟ್ಟುಕಥೆ ಎಂಬ ವಿರೋಧಗಳು ಕೇಳಿಬರುತ್ತಿವೆ. ಒಟ್ಟಾರೆಯಾಗಿ ಸಿನಿಮಾ ಬಿಡುಗಡೆಗೆ ಮುನ್ನವೇ ಕೇರಳದಾದ್ಯಂತ ಪರ ಮತ್ತು ವಿರೋಧದ ಚರ್ಚೆಗಳು ಕಾವು ಪಡೆದುಕೊಂಡಿವೆ.

