ಹೈದರಾಬಾದ್: ಟೆಕ್ಕಿಯೊಬ್ಬ ತನ್ನ ವಿಚ್ಛೇದಿತ ಮಾಜಿ ಪತ್ನಿಯನ್ನು ಇರಿದು ಕೊಂದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಕೌಟುಂಬಿಕ ದೌರ್ಜನ್ಯ ಪ್ರಕರಣದಿಂದ ಕೆನಡಾಕ್ಕೆ ಮರಳಲಾಗದೆ ನಿರುದ್ಯೋಗಿಯಾಗಿದ್ದ ಆತ, ತನ್ನ ತಾಯಿಯ ಸಾವಿಗೆ ಮಾಜಿ ಪತ್ನಿಯೇ ಕಾರಣ ಎಂದು ಆರೋಪಿಸಿದ್ದಾನೆ. ಅಲ್ಲದೇ ತನಗೆ ವಿದೇಶಕ್ಕೆ ಹೋಗಲೂ ಸಾಧ್ಯವಾಗದಿರಲು ಮಾಜಿ ಪತ್ನಿಯೇ ಕಾರಣವೆಂದು ಆರೋಪಿಸಿ ಆಕೆ ಮರು ಮದುವೆಯಾಗಿದ್ದನ್ನು ಸಹಿಸಲು ಸಾಧ್ಯವಾಗದೇ ಗರ್ಭಿಣಿಯಾಗಿದ್ದ ಮಾಜಿ ಪತ್ನಿಯನ್ನು ಬರ್ಬರವಾಗಿ ಕೊಲೆಗೈದಿದ್ದಾನೆ.
ಮಹೇಶ್ ಮಾಜಿ ಪತ್ನಿಯನ್ನೇ ಕೊಂದ ಟೆಕ್ಕಿ. ಸುನೀತಾ ಮಾಜಿ ಪತಿಯಿಂದ ಹತ್ಯೆಯಾದ ಗರ್ಭಿಣಿ. ಸುನಿತಾ ಹಾಗೂ ಮಹೇಶ್ ಸತಿ- ಪತಿಗಳಾಗಿದ್ದ ಸಂದರ್ಭದಲ್ಲಿ ಪತಿ ವಿರುದ್ಧ ಸುನೀತಾ ಕೌಟುಂಬಿಕ ಹಿಂಸಾಚಾರದ ದೂರು ದಾಖಲಿಸಿದ್ದಳು. ಆತ ಕೆನಡಾದಲ್ಲಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈ ದೂರಿನಿಂದಾಗಿ ಆತ ಕೆನಡಾಗೆ ಹಿಂದಿರುಗಲು ಸಾಧ್ಯವಾಗಿಲ್ಲ. ಅದಕ್ಕೆ ಹತಾಶಗೊಂಡ ವ್ಯಕ್ತಿ ಮಾಜಿ ಪತ್ನಿಯ ಮನೆಗೆ ನುಗ್ಗಿ ಆಕೆಯ ತಲೆಗೆ ಚಾಕುವಿನಿಂದ ಪದೇ ಪದೇ ಇರಿದು ಹತ್ಯೆ ಮಾಡಿದ್ದಾನೆ. ತನ್ನ ತಾಯಿಯ ಸಾವಿಗೂ ಮಾಜಿ ಪತ್ನಿಯೇ ಕಾರಣ ಎಂದು ಆರೋಪಿಸಿದ್ದಾನೆ.
ಮಹಿಳೆಯ ಎರಡನೇ ಪತಿ ತನ್ನ ದೂರಿನಲ್ಲಿ ಆಕೆ ಮೂರು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಹೇಳಿದ್ದಾರೆ. ಮಹೇಶ್ 2022 ರಲ್ಲಿ ಸುನೀತಾಳನ್ನು ವಿವಾಹವಾಗಿದ್ದ. ಬಳಿಕ ಆತ ಕೆನಡಾಕ್ಕೆ ತೆರಳಿದ್ದರು, ಅಲ್ಲಿಗೆ ಪತ್ನಿಯನ್ನು ಕೂಡ ಕರೆದುಕೊಂಡು ಹೋಗಿದ್ದ. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಶುರುವಾಗಿದ್ದವು ಈ ಕಾರಣದಿಂದ ಆಕೆ ಭಾರತಕ್ಕೆ ವಾಪಸಾಗಿದ್ದಳು. ಬಳಿಕ ಪತಿ ವಿರುದ್ಧ ಮಹಾರಾಷ್ಟ್ರದಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದಳು. ದಂಪತಿ 2024ರಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ ಸುನೀತಾ ಏಪ್ರಿಲ್ 2025 ರಲ್ಲಿ ಮತ್ತೊಂದು ಮದುವೆಯಾಗಿದ್ದಳು.
ಮಹೇಶ್ ತನ್ನ ತಾಯಿಯ ಮರಣದ ಬಳಿಕ್ ಮಾರ್ಚ್ 2025 ರಲ್ಲಿ ಭಾರತಕ್ಕೆ ಮರಳಿದ್ದ. ಕೌಟುಂಬಿಕ ಹಿಂಸಾಚಾರ ಪ್ರಕರಣದ ಕಾರಣ ಆತನ ವಿರುದ್ಧ ಲುಕ್-ಔಟ್ ನೋಟಿಸ್ ಜಾರಿಯಾಗಿತ್ತು. ಆತನ ಪಾಸ್‌ಪೋರ್ಟ್ ಅನ್ನು ಅಮಾನತುಗೊಳಿಸಲಾತ್ತು.
ಇದರಿಂದ ಆತ ಮತ್ತೆ ಕೆನಡಾಗೆ ಹಿಂತಿರುಗಲು ಸಾಧ್ಯವಾಗಲಿಲ್ಲ. ನಿರುದ್ಯೋಗಿಯಾಗಿದ್ದ. ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದ. ತನ್ನ ತಾಯಿಯ ಸಾವು, ಪತ್ನಿ ದೂರವಾಗಿದ್ದು, ವಾಪಸ್ ಕೆನಡಾಗೆ ಹೋಗಲು ಸಾಧ್ಯವಾಗದ ಸ್ಥಿತಿ… ಈ ಮಾನಸಿಕ ಯಾತನೆಯಿಂದಾಗಿ ನೊಂದಿದ್ದ ಮಹೇಶ್ ಮಾಜಿ ಪತ್ನಿಯನ್ನು ಕೊಲ್ಲಲೇಬೇಕೆಂಬ ಕೆಟ್ಟ ನಿರ್ಧಾರಕ್ಕೆ ಬಂದಿದ್ದ. ಆಕೆಯ ಸೋಷಿಯಲ್ ಮೀಡಿಯಾಗಳ ಖಾತೆಗಳ ಮೂಲಕ ಆಕೆಯ ವಿಳಾಸವನ್ನು ಪತ್ತೆಹಚ್ಚಿದ್ದ.
ಎರಡು ತಿಂಗಳ ಹಿಂದೆ ಹೈದರಾಬಾದ್ ತಲುಪಿ ಹಾಸ್ಟೆಲ್‌ನಲ್ಲಿ ವಾಸವಿದ್ದ. ದಂಪತಿ ಇತ್ತೀಚೆಗಷ್ಟೆ ಅಪಾರ್ಟ್ಮೆಂಟ್ ಕೂಡ ಖರೀದಿ ಮಾಡಿದ್ದರು. ಆತ ಎರಡು ಚಾಕುಗಳು, ಒಂದು ಡ್ರಿಲ್ಲಿಂಗ್ ಮೆಷಿನ್ ಮತ್ತು ಐದು ಲೀಟರ್ ಪೆಟ್ರೋಲ್ ತುಂಬಿದ ಕ್ಯಾನ್‌ನೊಂದಿಗೆ ಮಹಿಳೆಯ ಅಪಾರ್ಟ್‌ಮೆಂಟ್‌ಗೆ ತಲುಪಿದ್ದ. ಮಾಜಿ ಪತ್ನಿಯ ಮನೆಗೆ ನುಗ್ಗಿ, ಆಕೆ ಇದ್ದ ಕೋಣೆಗೆ ಪ್ರವೇಶಿಸಿ, ಒಳಗಿನಿಂದ ಲಾಕ್ ಮಾಡಿ, ಆಕೆಯ ತಲೆಗೆ ಚಾಕುವಿನಿಂದ ಹಲವು ಬಾರಿ ಇರಿದು ಕೊಂದಿದ್ದಾನೆ.
ಮಹಿಳೆಯ ಅತ್ತೆ ಬಾಲ್ಕನಿಯಲ್ಲಿದ್ದರು. ಕುಟುಂಬ ಸದಸ್ಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಮನೆಗೆ ಬರುವಷ್ಟರಲ್ಲಿ ಆರೋಪಿ ರೂಮಿನಲ್ಲಿ ಪೆಟ್ರೋಲ್ ಸುರಿದುಕೊಂಡು ಶೌಚಾಲಯಕ್ಕೆ ಬೀಗ ಹಾಕಿಕೊಂಡು ಒಳಗೆ ಸೇರಿದ್ದ. ಅಲ್ಲದೇ ಕೋಣೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ. ಆತನನ್ನು ಶೌಚಾಲಯದಿಂದ ಹೊರಗೆ ತರುವಷ್ಟರಲ್ಲಿ ಪೊಲೀಸರು ಸುಸ್ತಾಗಿದ್ದರು. ಅಂತಿಮವಾಗಿ ಆರೋಪಿ ಮಹೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

