ಹೋಳಿ ಹಬ್ಬಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ಗಿಫ್ಟ್ ದೊರೆಯಲಿದೆ. ಹೌದು ತುಟ್ಟಿಭತ್ಯೆ (ಡಿಎ) ಏರಿಕೆಯಾಗಲಿದೆ. ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದ ನಂತರ, ಈ ಹೆಚ್ಚಳವು ಜನವರಿ 1ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ.
ಕೇಂದ್ರ ಸರ್ಕಾರಿ ನೌಕರರು ಸದ್ಯ ವರ್ಷಕ್ಕೆ ಎರಡು ಬಾರಿ ಡಿಎ ಹೆಚ್ಚಳ ಪಡೆಯಲಿದ್ದಾರೆ. ಈಗ ಮಾರ್ಚ್ ತಿಂಗಳಿನಲ್ಲಿ ಡಿಎ ಸುಮಾರು 10,800 ರೂ. ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಕೇಂದ್ರ ಸರ್ಕಾರಿ ನೌಕರರು, ನಿವೃತ್ತರಿಗೆ ಬಂಪರ್ ಗಿಫ್ಟ್ ದೊರೆಯಲಿದೆ.
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಶೇ 2ರಷ್ಟು ಡಿಎ ಹೆಚ್ಚಳ ಮಾಡಲು ಅನುಮೋದನೆ ದೊರೆಯಲಿದೆ. ಅಲ್ಲದೇ ಈ ಹೆಚ್ಚಳ ಜನವರಿ 1ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ. ಈ ತಿಂಗಳ ಅಂತ್ಯದಲ್ಲಿ ಸರ್ಕಾರ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಡಿಎ ಹೆಚ್ಚಳ ಲೆಕ್ಕಾಚಾರ: ಪ್ರಸ್ತುತ ಕೇಂದ್ರ ಸರ್ಕಾರದ ನೌಕರರು, ನಿವೃತ್ತರು 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಶೇ 58 ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಅಂದಿನ ಹಣದುಬ್ಬರ ದತ್ತಾಂಶದ ಆಧಾರದ ಮೇಲೆ ಸರ್ಕಾರವು ಶೇ 3 ಹೆಚ್ಚಳಕ್ಕೆ ಅನುಮೋದನೆ ನೀಡಿದ ನಂತರ, ಈ ದರವು ಅಕ್ಟೋಬರ್ 2025 ರಿಂದ ಜಾರಿಯಲ್ಲಿದೆ.
ಈಗ, ಹೊಸ ಹಣದುಬ್ಬರ ಅಂಕಿಅಂಶಗಳು ಲಭ್ಯವಿರುವುದರಿಂದ, ಮತ್ತೊಂದು ಸುತ್ತಿನ ಡಿಎ ಹೆಚ್ಚಳದ ನಿರೀಕ್ಷೆ ಲೆಕ್ಕಾಚಾರವಿದೆ. ಶೇ. 2ರಷ್ಟು ಡಿಎ ಹೆಚ್ಚಳ ಏಕೆ ಎಂದು ವಿಶ್ಲೇಷಿಸಿದರೆ ಡಿಎ ಪರಿಷ್ಕರಣೆಗೆ ಕಾರ್ಮಿಕ ಸಚಿವಾಲಯವು ಪ್ರತಿ ತಿಂಗಳು ಬಿಡುಗಡೆ ಮಾಡುವ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ ಮೇಲೆ ನಿರ್ಧರಿತವಾಗುತ್ತದೆ.
ಡಿಸೆಂಬರ್ 2025ರ ಸೂಚ್ಯಂಕವು 148.2 ರಷ್ಟಿದ್ದು, ಕಳೆದ 12 ತಿಂಗಳ ಸರಾಸರಿಯು 145.54ಕ್ಕೆ ತಲುಪಿದೆ. ಆದ್ದರಿಂದ ಹಾಲಿ ಇರುವ ಶೇ 58 ತುಟ್ಟಿಭತ್ಯೆಯನ್ನು ಶೇ 60ಕ್ಕೆ ಏರಿಕೆ ಮಾಡಲಾಗುತ್ತದೆ ಎಂದು ಅಂದಾಜಿಸಲಾಗಿದೆ.
ಪ್ರಸ್ತುತ ಡಿಎ ಶೇ. 58 ರಷ್ಟಿರುವುದರಿಂದ ಈಗ ಸಚಿವ ಸಂಪುಟ ಶೇ. 2ರಷ್ಟು ಹೆಚ್ಚಳವನ್ನು ಮಾಡಬಹುದು ಎಂಬುದು ಅಂದಾಜು. ಇದರಿಂದ ಒಟ್ಟು ಡಿಎ ಶೇ. 60ಕ್ಕೆ ಏರಲಿದೆ. ಆದರೆ ಈ ಕುರಿತು ಅಂತಿಮ ತೀರ್ಮಾನ ಪ್ರಕಟವಾಗಬೇಕಿದೆ.
ಡಿಎ 10,800 ರೂ. ಆಗುವುದು ಹೇಗೆ?
- ಹಂತ 1 (Level 1) ನೌಕರರಿಗೆ ಕನಿಷ್ಠ ಮೂಲ ವೇತನ 18,000 ರೂ. ಇರುತ್ತದೆ.
- 18,000 ರೂ. ನ ಶೇ. 2 ರಷ್ಟು = ಪ್ರತಿ ತಿಂಗಳಿಗೆ 360 ರೂ. ಹೆಚ್ಚಳ.
- 18,000 ರೂ. ನ ಶೇ. 60 ರಷ್ಟು ಡಿಎ = ಪ್ರತಿ ತಿಂಗಳಿಗೆ 10,800 ರೂ.
ಇದರರ್ಥ ಕೇಂದ್ರ ಸರ್ಕಾರದ ಈ ಹೆಚ್ಚಳ ಅಧಿಕೃತವಾಗಿ ಘೋಷಣೆಯಾದ ನಂತರ, ಅತ್ಯಂತ ಕಡಿಮೆ ವೇತನ ಪಡೆಯುವ ನೌಕರರ ಮಾಸಿಕ ಡಿಎ ಮೊತ್ತವು 10,800 ರೂ. ತಲುಪಲಿದೆ ಎಂದು ಅಂದಾಜಿಸಲಾಗಿದೆ.
ಡಿಎ ಹೆಚ್ಚಳವು ಜನವರಿ 2026 ರಿಂದಲೇ ಜಾರಿಗೆ ಬರಲಿದ್ದರೂ, ಅಧಿಕೃತ ಘೋಷಣೆಯು ಸಾಮಾನ್ಯವಾಗಿ ಸ್ವಲ್ಪ ತಡವಾಗಿ ಹೊರಬೀಳುತ್ತದೆ. ಈ ವಿಳಂಬದ ಕಾರಣದಿಂದಾಗಿ, ನೌಕರರು ಮತ್ತು ಪಿಂಚಣಿದಾರರು ಪರಿಷ್ಕೃತ ಡಿಎ ಜೊತೆಗೆ ಜನವರಿ ಮತ್ತು ಫೆಬ್ರವರಿ ತಿಂಗಳ ಎರಡು ತಿಂಗಳ ಬಾಕಿ ಹಣವನ್ನು ತಮ್ಮ ಸಂಬಳ ಅಥವಾ ಪಿಂಚಣಿಯಲ್ಲಿ ಪಡೆಯುವ ಸಾಧ್ಯತೆಯಿದೆ.
ಹೋಳಿ ಹಬ್ಬದ ಹಿನ್ನಲೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಬೇಗ ಡಿಎ ಹೆಚ್ಚಳ ಘೋಷಣೆ ಮಾಡಬಹುದು. ಈ ವರ್ಷದ ಮಾರ್ಚ್ 4 ರಂದು ಹೋಳಿ ಹಬ್ಬವಿದೆ.

