ದಾವಣಗೆರೆ: ಮಗಳ ಪುಸ್ತಕವನ್ನು ಸುಟ್ಟು ಹಾಕಿ, ಶಾಲೆಗೆ ಹೋಗಬೇಡ ಎಂದು ತಂದೆ ತಾಕೀತು ಮಾಡಿದ್ದಕ್ಕೆ ಸಿಡಿದೆದ್ದ ಮಗಳು ಅಪ್ಪನ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
10ನೇ ತರಗತಿ ಓದುತ್ತಿದ್ದ ಮಗಳಿಗೆ ತಂದೆ, ಶಾಲೆಗೆ ಹೋಗಬೇಡ ಎಂದು ಆಕೆಯ ಪುಸ್ತಕಗಳನ್ನು ಸುಟ್ಟು ಹಾಕಿದ್ದಾನೆ. ಅಲ್ಲದೇ ಗಲಾಟೆ ಮಾಡಿ ಹೆದರಿಸಿದ್ದಾನೆ. ಇದರಿಂದ ಬೇಸರಗೊಂಡ ಮಗಳು 112 ಸಂಖ್ಯೆಗೆ ಕರೆ ಮಾಡಿದ್ದಾಳೆ. ತನ್ನ ತಂದೆ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದಾರೆ. ನನ್ನನ್ನು ಶಾಲೆಗೆ ಕಳುಹಿಸುತ್ತಿಲ್ಲ. ಪುಸ್ತಕಗಳನ್ನು ಸುಟ್ಟು ಹಾಕಿದ್ದಾರೆ ಎಂದು ಕಣ್ಣಿರಿಟ್ಟಿದ್ದಾಳೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ನ್ಯಾಮತಿ ಠಾಣೆ ಪೊಲೀಸರು ವಿದ್ಯಾರ್ಥಿನಿಯ ತಂದೆಗೆ ಬುದ್ಧಿಹೇಳಿದ್ದಾರೆ. ಕುಡಿದು ಬಂದು ಗಲಾಟೆ ಮಾದಿದ್ದೂ ಅಲ್ಲದೇ ಮಗಳನ್ನು ಶಾಲೆಗೆ ಕಳುಹಿಸದೇ ಹಿಂಸಿಸುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿನಿಗೆ ಅಗತ್ಯ ಪುಸ್ತಕ ಹಾಗೂ ನೋಟ್ ಬುಕ್ ಗಳನ್ನು ಕೊಡಿಸಿ ಧೈರ್ಯ ತುಂಬಿದ್ದಾರೆ. ಪಿಐ ರವಿಕುಮಾರ್, ಹೇಮರಾಜ್ ಅವರು ವಿದ್ಯಾರ್ಥಿನಿಗೆ ಅಗತ್ಯವಿರುವ ಪುಸ್ತಕ, ನೋಟ್ ಬುಕ್ ಕೊಡಿಸಿ ಶಿಕ್ಷಕರಿಗೂ ಮಾಹಿತಿ ನೀಡಿದ್ದಾರೆ. ಆಕೆಯ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ನ್ಯಾಮತಿ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

