HomeJobsಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಖಾಲಿ ಚಿಪ್ಪು ಕೊಟ್ಟ ಸಿದ್ದರಾಮಯ್ಯ!

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಖಾಲಿ ಚಿಪ್ಪು ಕೊಟ್ಟ ಸಿದ್ದರಾಮಯ್ಯ!

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.85 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಸರ್ಕಾರ ವಿವಿಧ ಕಾರಣಕ್ಕೆ ನೇಮಕಾತಿಗಳನ್ನು ಮುಂದೂಡುತ್ತಲೇ ಬಂದಿದೆ. ಒಂದು ಕಡೆ ನೇಮಕಾತಿ ನಡೆಯುತ್ತಿಲ್ಲ,  ಮತ್ತೊಂದು ಕಡೆ ಯುವಕರ ವಯೋಮಿತಿ ಮೀರುತ್ತಿದೆ. ಸರ್ಕಾರಿ ಉದ್ಯೋಗ ಪಡೆಯುವುದು ಕರ್ನಾಟಕದಲ್ಲಿ ಬಹುದೊಡ್ಡ ಸವಾಲಾಗಿದೆ.

ರಾಜ್ಯದ ಪ್ರತಿಪಕ್ಷ ಬಿಜೆಪಿ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದೆ. ‘ಸಿಎಂ ಗದ್ದುಗೆ ಉಳಿಸಿಕೊಳ್ಳಲು ನಿಗಮ ಮಂಡಳಿಯ ಅಧ್ಯಕ್ಷರಿಗೆ ಸಚಿವ ದರ್ಜೆ ಸ್ಥಾನಮಾನ ನೀಡಲು ಕಾಳಜಿ ವಹಿಸುವ ಸಿದ್ದರಾಮಯ್ಯನವರು ನಿಗಮಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸದೆ ಉದ್ಯೋಗಾಕಾಂಕ್ಷಿಗಳಿಗೆ ಖಾಲಿ ಚಿಪ್ಪು ಕೊಟ್ಟಿದ್ದಾರೆ’ ಎಂದು ದೂರಿದೆ.

‘ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರ್ಕಾರದಲ್ಲಿ ಯಾವ ನಿಗಮ ಮಂಡಳಿಗಳಲ್ಲೂ ದುಡ್ಡಿಲ್ಲ, ಆದರೂ ನಿಗಮ ಮಂಡಳಿ ಅಧ್ಯಕ್ಷರಿಗೆ ಸಚಿವ ದರ್ಜೆ ಸ್ಥಾನಮಾನ ನೀಡಿರುವುದು ನಿಜಕ್ಕೂ ದುರಂತವೇ ಸರಿ’ ಎಂದು ಆರೋಪಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮ್ಮ ಈ ಅಪ್ರಯೋಜಕ ನಡೆ ಗಮನಿಸಿದರೆ, ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ’ ಎಂಬ ಗಾದೆಯಂತಾಗಿದೆ’ ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕೆ ಮಾಡಿದೆ.

ಯಾವ-ಯಾವ ಇಲಾಖೆಯ ಎಷ್ಟು ಹುದ್ದೆಗಳು ಖಾಲಿ ಇದೆ ಎಂದು ಬಿಜೆಪಿ ತನ್ನ ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

  • ಕೆಪಿಟಿಸಿಎಲ್‌ ನಿಗಮ 34,474 ಹುದ್ದೆಗಳು ಖಾಲಿ
  • ಕೆಎಸ್‌ಆರ್‌ಟಿಸಿ ನಿಗಮ 8590 ಹುದ್ದೆಗಳು ಖಾಲಿ
  • ಕೆಪಿಸಿಎಲ್‌ ನಿಗಮ 4635 ಹುದ್ದೆಗಳು ಖಾಲಿ
  • ಹುಬ್ಬಳ್ಳಿ ವಿದ್ಯುತ್‌  ಸರಬರಾಜು ನಿಗಮ 6540 ಹುದ್ದೆಗಳು ಖಾಲಿ
  • ಮಂಗಳೂರು ವಿದ್ಯುತ್‌ ಸರಬರಾಜು ನಿಗಮ 4028 ಹುದ್ದೆಗಳು ಖಾಲಿ
  • ಕರ್ನಾಟಕ ನೀರಾವರಿ ನಿಗಮ 2310 ಹುದ್ದೆಗಳು ಖಾಲಿ
  • ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ 3302 ಹುದ್ದೆಗಳು ಖಾಲಿ
  • ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ನಿಗಮ 2303 ಹುದ್ದೆಗಳು ಖಾಲಿ
  • ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ 4105 ಹುದ್ದೆಗಳು ಖಾಲಿ
  • ಬೆಂಗಳೂರು ನೀರು ಸಬರಾಜು ಒಳಚರಂಡಿ 3211 ಹುದ್ದೆಗಳು ಖಾಲಿ

ಯುವಕರ ಸರ್ಕಾರಿ ಕೆಲಸದ ಕನಸಿಗೆ ಕೊಳ್ಳಿಯಿಟ್ಟಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರ, ಸ್ವಾರ್ಥದ ಕುಡಿಕೆ ತುಂಬಿಸಿಕೊಳ್ಳಲು ಹಗಲಿರುಳು ಶ್ರಮಿಸುತ್ತಿದೆ. ನೂರಕ್ಕೂ ಹೆಚ್ಚು ಇರುವ ನಿಗಮಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿಯಿದ್ದರೂ ನೇಮಕಾತಿಗೆ ಕ್ರಮ ವಹಿಸದೆ ಕಾಂಗ್ರೆಸ್ ಸರ್ಕಾರ ದ್ರೋಹ ಬಗೆದಿದೆ ಎಂದು ಬಿಜೆಪಿ ಆರೋಪ ಮಾಡಿದೆ. ಇಂತಹ ಲಜ್ಜೆಗೆಟ್ಟಿರುವ ಕೈಲಾಗದ ಸರ್ಕಾರ ತೊಲಗುವ ಸಮಯ ಸನಿಹವಾಗುತ್ತಿದೆ ಎಂದು ಹೇಳಿದೆ.

ಬಿಜೆಪಿ ಈ ಆರೋಪಕ್ಕೆ ಕಾರಣವಿದೆ. ಫೆಬ್ರವರಿ 7ರಂದು ಕರ್ನಾಟಕ ಸರ್ಕಾರ ಪ್ರಸ್ತುತ ಕಾರ್ಯ ನಿರ್ವಹಣೆ ಮಾಡುತ್ತಿರುವ ನಿಗಮ/ ಮಂಡಳಿ/ ಪ್ರಾಧಿಕಾರಗಳ ಅಧ್ಯಕ್ಷರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ತನಕ ರಾಜ್ಯ ಸಚಿವರ ಸ್ಥಾನಮಾನ ನೀಡಿದೆ.

ಈ ಆದೇಶದಂತೆ ಆಯಾ ಇಲಾಖೆಯು ಸಂಬಂಧಿಸಿದ ಅಧಿನಿಯಮ/ ನಿಯಮಗಳು ರೀತ್ಯಾ ತಕ್ಷಣದಿಂದ ಅಧ್ಯಕ್ಷರುಗಳು ಕಾರ್ಯ ನಿರ್ವಹಿಸುವಂತೆ ಆದೇಶ ಹೊರಡಿಸಿ ರಾಜ್ಯ ಸಚಿವರಿಗೆ ಅನ್ವಯಿಸುವ ಸೌಲಭ್ಯಗಳನ್ನು ಒದಗಿಸತಕ್ಕದ್ದು ಎಂದು ಆಡಳಿತ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಆರ್. ಅಶೋಕ ಟೀಕೆ; ನಿಗಮ/ ಮಂಡಳಿ/ ಪ್ರಾಧಕಾರದ ಅಧ್ಯಕ್ಷರುಗಳಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿದ್ದಕ್ಕೆ ಪ್ರತಿಪಕ್ಷ ನಾಯಕ ಆರ್.ಅಶೋಕ ಸರ್ಕಾರವನ್ನು ಟೀಕಿಸಿದ್ದರು. ಕಾಂಗ್ರೆಸ್ ಪಕ್ಷದ ಹಾಲಿ ಶಾಸಕರ ಸಂಖ್ಯೆ 134, ಸಚಿವ ಸ್ಥಾನಮಾನ ಹೊಂದಿರುವವರ ಸಂಖ್ಯೆ 149ಕ್ಕೂ ಅಧಿಕ’ ಎಂದು ಹೇಳಿದ್ದರು.

“ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಎನ್ನುವಂತೆ ಅಭಿವೃದ್ಧಿಗೆ ದುಡ್ಡಿಲ್ಲದಿದ್ದರೂ, ಸಿಕ್ಕಸಿಕ್ಕವರಿಗೆಲ್ಲ ನಿಗಮ ಮಂಡಳಿಗಳಲ್ಲಿ ಸಚಿವ ಸ್ಥಾನಮಾನ ಕೊಟ್ಟಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ತೆರಿಗೆ ಹಣವನ್ನ ಪೋಲು ಮಾಡುತ್ತಿದೆ’ ಎಂದು ದೂರಿದ್ದರು.

‘ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳಿಗೆ ಅಭಿವೃದ್ಧಿ ನಿಗಮಗಳು ಸೇರಿದಂತೆ ಅನೇಕ ನಿಗಮ ಮಂಡಳಿಗಳು ಅನುದಾನವಿಲ್ಲದೆ ಸೊರಗುತ್ತಿವೆ. ಅಧ್ಯಕ್ಷರಿಗೆ ಗೂಟದ ಕಾರು, ಸಿಬ್ಬಂದಿಗೆ ಸಂಬಳ ಸಾರಿಗೆ ಕೊಡುವುದೊಂದೇ ಸಾಧನೆಯಾಗಿದೆ’ ಎಂದು ಆರೋಪಿಸಿದ್ದರು.

‘ರಾಜ್ಯ ಕಂಡ ಅತ್ಯಂತ ದುರ್ಬಲ ಮತ್ತು ಅಸಮರ್ಥ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು, ಸಿಕ್ಕಸಿಕ್ಕವರಿಗೆ ಸಚಿವ ಸ್ಥಾನಮಾನ ಕೊಟ್ಟು ತಮ್ಮ ಸ್ವಾರ್ಥಕ್ಕಾಗಿ ರಾಜ್ಯದ ಜನರ ತೆರಿಗೆ ಹಣವನ್ನ ಪೋಲು ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರೇ, ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು? ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ’ ಎಂದು ಸಲಹೆ ನೀಡಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular