ತಿರುವನಂತಪುರಂ: 2006ರಲ್ಲಿ ಕೇರಳದ ಸಾರ್ವಜನಿಕ ನಿರ್ಮಾಣ ಇಲಾಖೆಯ(PWD) ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಮುಖ್ಯ ಚುನಾವಣಾ ಆಯುಕ್ತ(CEC) ಜ್ಞಾನೇಶ್ ಕುಮಾರ್ ವಿರುದ್ಧ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳದ(VACB) ತನಿಖೆಗೆ ಕೇರಳದ ಗೃಹ ಸಚಿವ ರಮೇಶ್ ಚೆನ್ನಿಥಾಲಾ ಭಾನುವಾರ (ಅಕ್ಟೋಬರ್ 4) ಆದೇಶಿಸಿದ್ದಾರೆ.
ಈ ಪ್ರಕರಣವು ಮಲೇಷ್ಯಾದ ಸಿವಿಲ್ ಇಂಜಿನಿಯರ್ ಲೀ ಸೀ ಬಿನ್ ಅವರ ಆತ್ಮಹತ್ಯೆಗೆ ಸಂಬಂಧಿಸಿದೆ. ಇವರು ಕೇರಳ ರಾಜ್ಯ ಸಾರಿಗೆ ಯೋಜನೆಯ(KSTP) ಅಡಿಯಲ್ಲಿ ಎಂಸಿ(MC) ರಸ್ತೆಯನ್ನು ಮೇಲ್ದರ್ಜೆಗೇರಿಸುವ ಕಾರ್ಯವನ್ನು ವಹಿಸಿಕೊಂಡಿದ್ದ ‘PATI-BEL’ ಒಕ್ಕೂಟದೊಂದಿಗೆ (consortium) ಗುರುತಿಸಿಕೊಂಡಿದ್ದರು. ಆ ಇಂಜಿನಿಯರ್ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ನಲ್ಲಿ, ಆಗ ರಾಜ್ಯದ ಪಿಡಬ್ಲ್ಯೂಡಿ ಕಾರ್ಯದರ್ಶಿಯಾಗಿದ್ದ ಜ್ಞಾನೇಶ್ ಕುಮಾರ್ ಅವರ ಹೆಸರನ್ನು ಉಲ್ಲೇಖಿಸಲಾಗಿತ್ತು ಎಂದು ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಅಗತ್ಯ ಕಡತಗಳನ್ನು ಕೋರಿದ ಗೃಹ ಇಲಾಖೆ
2006ರಲ್ಲಿ ನಡೆಸಲಾದ ಆರಂಭಿಕ ತನಿಖೆಯು ಬಾಹ್ಯ ಒತ್ತಡದಿಂದಾಗಿ ಹಾದಿ ತಪ್ಪಿತ್ತು ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಹೊಸ ತನಿಖೆಯನ್ನು ಪ್ರಾರಂಭಿಸಲಾಗಿದೆ.
ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಇಲಾಖೆಯು, 2006ರ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳದ (VACB) ಆರಂಭಿಕ ತನಿಖೆಗೆ ಸಂಬಂಧಿಸಿದ ಎಲ್ಲಾ ಅಗತ್ಯ ಕಡತಗಳನ್ನು ಒದಗಿಸುವಂತೆ ಕೋರಿದೆ.
ಗೃಹ ಸಚಿವರ ಕಚೇರಿಯ ಪ್ರಕಾರ, ಬಾಹ್ಯ ಪ್ರಭಾವದ ಆರೋಪಗಳ ಕುರಿತು ಕೂಲಂಕಷ ತನಿಖೆ ನಡೆಸುವಂತೆ ಮತ್ತು ತನಿಖೆಯ ಫಲಿತಾಂಶಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಮೇಶ್ ಚೆನ್ನಿಥಾಲಾ ಅವರು ವಿಜಿಲೆನ್ಸ್ ನಿರ್ದೇಶಕರಿಗೆ ಸೂಚಿಸಿದ್ದಾರೆ. ಪ್ರಕರಣದಲ್ಲಿ ಬಾಹ್ಯ ಪ್ರಭಾವದ ಆರೋಪಗಳು ಗಂಭೀರವಾಗಿದ್ದು, ವಿವರವಾದ ತನಿಖೆಯ ಅಗತ್ಯವಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
ಎಸ್‌ಐಆರ್ (SIR) ವಿವಾದದ ನಡುವೆಯೇ ಸಿಇಸಿ ವಿರುದ್ಧ ತನಿಖೆ
ಚುನಾವಣಾ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಅಕ್ರಮಗಳು ಮತ್ತು ಸಾಮೂಹಿಕವಾಗಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಶುಕ್ರವಾರ ದೆಹಲಿ ಮತ್ತು ಮುಂಬೈನಲ್ಲಿ ವಿರೋಧ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು ಮತ್ತು ಯುವ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವಾಗಲೇ ಈ ಬೆಳವಣಿಗೆ ನಡೆದಿದೆ.
ಚುನಾವಣಾ ಪಟ್ಟಿಗಳು, ಮತದಾರರ ನೋಂದಣಿ ಮತ್ತು ತಂತ್ರಜ್ಞಾನ ವ್ಯವಸ್ಥೆಗಳಿಗೆ ಸಂಬಂಧಿಸಿದ ನಿರ್ಧಾರಗಳ ಕುರಿತು ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಪ್ರತ್ಯೇಕ ಸಂದರ್ಭಗಳಲ್ಲಿ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಅಧಿಕೃತವಾಗಿ ಆಕ್ಷೇಪಣೆಗಳನ್ನು ದಾಖಲಿಸಿದ್ದರು ಎಂದು ಹೇಳಲಾಗಿತ್ತು.
ಈ ಆಕ್ಷೇಪಣೆಗಳು ‘ಫಾರ್ಮ್ 6’ ಸಲ್ಲಿಕೆ, ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಮತ್ತು ಕೇಂದ್ರ ಚುನಾವಣಾ ಪಟ್ಟಿ ಡೇಟಾಬೇಸ್ ಗಳಿಗೆ ಪ್ರವೇಶ ಪಡೆಯುವ ವಿಷಯಗಳಿಗೆ ಸಂಬಂಧಿಸಿದ್ದವು. ಭಾರತೀಯ ಚುನಾವಣಾ ಆಯೋಗವು (ECI) ನಂತರ ಸಾಂಸ್ಥಿಕ ಭಿನ್ನಾಭಿಪ್ರಾಯದ ಆರೋಪಗಳನ್ನು ತಳ್ಳಿಹಾಕಿತು ಮತ್ತು ಕರಡು ಹಂತಗಳಲ್ಲಿ ಆಡಳಿತಾತ್ಮಕ ಪ್ರಶ್ನೆಗಳು, ಕಾರ್ಯಾಚರಣೆಗೆ ಸಂಬಂಧಿಸಿದ ಮಾಹಿತಿ ಹಾಗೂ ಸಲಹೆಗಳನ್ನು ಪಡೆಯುವುದು ಸಾಮಾನ್ಯ ಪ್ರಕ್ರಿಯೆ ಎಂದು ತಿಳಿಸಿತು. ಎಸ್‌ಐಆರ್ (SIR) ವೇಳಾಪಟ್ಟಿಗೆ ಸಂಬಂಧಿಸಿದ ಎಲ್ಲಾ ಅಂತಿಮ ನಿರ್ಧಾರಗಳನ್ನು ಸರ್ವಾನುಮತದಿಂದಲೇ ತೆಗೆದುಕೊಳ್ಳಲಾಗಿದೆ ಎಂದು ಆಯೋಗವು ಒತ್ತಿಹೇಳಿತು.
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ‘ಇಂಡಿಯಾ’ (INDIA) ಮೈತ್ರಿಕೂಟವು ದೇಶಾದ್ಯಂತ ತನ್ನ ಹೋರಾಟ ತೀವ್ರಗೊಳಿಸುತ್ತಿದೆ. ವಿರೋಧ ಪಕ್ಷಗಳು ಅಕ್ಟೋಬರ್ 6 ರಂದು ನಡೆಯಲಿರುವ ಪ್ರತಿಭಟನೆ ಮತ್ತು ನವೆಂಬರ್ 1 ರಂದು ನವದೆಹಲಿಯಲ್ಲಿ ನಡೆಯಲಿರುವ ಬೃಹತ್ ರ್ಯಾಲಿಯನ್ನೊಳಗೊಂಡಂತೆ ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಂಡಿವೆ.

