ನವದೆಹಲಿ: ಉದ್ಯೋಗಾಕಾಂಕ್ಷಿಗಳಿಗೆ ಸುಪ್ರೀಂ ಕೋರ್ಟ್ ಆಫ್ ಇಂಡಿಯಾ ಭರ್ಜರಿ ಅವಕಾಶ ನೀಡಿದೆ. ಗ್ರೂಪ್-ಬಿ ನಾನ್-ಗೆಜೆಟೆಡ್ ಕೇಡರ್‌ನ ಜೂನಿಯರ್ ಕೋರ್ಟ್ ಅಸಿಸ್ಟೆಂಟ್ (JCA) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಈ ನೇಮಕಾತಿಯಡಿ ಒಟ್ಟು 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಈ ಹುದ್ದೆಗಳಿಗೆ ಯಾವುದೇ ವಿಭಾಗದಲ್ಲಿ ಬ್ಯಾಚುಲರ್ ಡಿಗ್ರಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹತೆ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು 2026ರ ಅಕ್ಟೋಬರ್ 28ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು 2026ರ ಸೆಪ್ಟೆಂಬರ್ 1ರ ವೇಳೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಬ್ಯಾಚುಲರ್ ಡಿಗ್ರಿ ಪೂರ್ಣಗೊಳಿಸಿರಬೇಕು. ಇದರ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಇಂಗ್ಲಿಷ್‌ನಲ್ಲಿ ನಿಮಿಷಕ್ಕೆ ಕನಿಷ್ಠ 35 ಪದಗಳ (35 WPM) ಟೈಪಿಂಗ್ ವೇಗ ಹೊಂದಿರಬೇಕು.
ವಯೋಮಿತಿ
2026ರ ಸೆಪ್ಟೆಂಬರ್ 1ರ ವೇಳೆಗೆ ಅಭ್ಯರ್ಥಿಗಳ ವಯಸ್ಸು 18ರಿಂದ 30 ವರ್ಷಗಳೊಳಗೆ ಇರಬೇಕು. ನಿಯಮಾನುಸಾರ ಎಸ್‌ಸಿ, ಎಸ್‌ಟಿ, ಒಬಿಸಿ, ದಿವ್ಯಾಂಗರು ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹1,500 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್‌ಸಿ, ಎಸ್‌ಟಿ, ಒಬಿಸಿ, ಮಾಜಿ ಸೈನಿಕರು ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ ₹750 ಶುಲ್ಕ ನಿಗದಿಯಾಗಿದೆ.
ಆಯ್ಕೆ ಪ್ರಕ್ರಿಯೆ
ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಒಟ್ಟು ನಾಲ್ಕು ಹಂತಗಳಲ್ಲಿ ನಡೆಯಲಿದೆ. ಆಬ್ಜೆಕ್ಟಿವ್ ಟೈಪ್ ಪರೀಕ್ಷೆಯನ್ನು ದೇಶದಾದ್ಯಂತ 131 ನಗರಗಳಲ್ಲಿ ನಡೆಸಲಾಗುತ್ತದೆ.ಇನ್ನು ಕಂಪ್ಯೂಟರ್ ಟೈಪಿಂಗ್ ಟೆಸ್ಟ್, ಡಿಸ್ಕ್ರಿಪ್ಟಿವ್ ಪರೀಕ್ಷೆ ಹಾಗೂ ಸಂದರ್ಶನವನ್ನು ದೆಹಲಿಯಲ್ಲಿ ನಡೆಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಸೂಕ್ತ.
ಜೈನ್ ಅರ್ಚಕರು, ಬೌದ್ಧ ಧಮ್ಮಚಾರಿ ಮತ್ತು ಸಿಖ್ ಗ್ರಂಥಿಗಳಿಗೆ ಮಾಸಿಕ ಗೌರವಧನ : ಅರ್ಜಿ ಆಹ್ವಾನ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2026-27ನೇ ಸಾಲಿಗೆ ಜೈನ್ ಅರ್ಚಕರು, ಬೌದ್ಧ ಧಮ್ಮಚಾರಿಗಳು ಮತ್ತು ಸಿಖ್ ಗ್ರಂಥಿಗಳಿಗೆ ಮಾಸಿಕ ಗೌರವ ಧನ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಮಾಹಿತಿ ಕೇಂದ್ರಗಳಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಬಸದಿ ನೋಂದಣಿ ಪ್ರತಿ, ಆಡಳಿತ ಮಂಡಳಿ ಪ್ರತಿ, ಅರ್ಚಕರುಗಳ ಭಾವಚಿತ್ರ, ವಾಸಸ್ಥಳ ದೃಢೀಕರಣ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ವಿವರ, ಆಧಾರ್ ಕಾರ್ಡ್ ಪ್ರತಿ, ಮಾಹೆವಾರು ಕರ್ತವ್ಯದ ಹಾಜರಾತಿ, ಸೇವಾ ದೃಢೀಕರಣ ಪತ್ರ, ಧಾರ್ಮಿಕ ವಿದ್ಯಾರ್ಹತೆ ಕುರಿತು ಅಗತ್ಯ ದಾಖಲೆ, ರೇಷನ್ ಕಾರ್ಡ್ ಪ್ರತಿ ಹಾಗೂ ರೂ. 100/- ಗಳ ಛಾಪಾ ಕಾಗದದಲ್ಲಿ ಪ್ರಮಾಣ ಪತ್ರವನ್ನು ಲಗತ್ತಿಸಿ ಸಲ್ಲಿಸುವುದು.
ಷರತ್ತುಗಳು: ಕರ್ನಾಟಕ ರಾಜ್ಯದಲ್ಲಿನ ಸಂಘಗಳ ನೊಂದಣಿ ಕಾಯ್ದೆ 1960 ಅಥವಾ ಟ್ರಸ್ಟ್ ಕಾಯ್ದೆಯನ್ವಯ ಅಥವಾ ಇತರೆ ಸಂಬಂಧಪಟ್ಟ ಕಾಯ್ದೆಯಡಿ ನೋಂದಣಿಯಾಗಿರಬೇಕು. ಈ ಸಂಸ್ಥೆಯ ಆಡಳಿತ ಮಂಡಳಿಯು ಅರ್ಚಕರುಗಳು, ಧಮ್ಮಚಾರಿಗಳು ಮತ್ತು ಗ್ರಂಥಿಗಳನ್ನು ಆಯ್ಕೆ ಮಾಡಿರಬೇಕು. ಅನುದಾನ ಲಭ್ಯತೆಗೆ ಅನುಗುಣವಾಗಿ ಗೌರವಧನವನ್ನು ಪಾವತಿ ಮಾಡಲಾಗುವುದು. ನೋಂದಾಯಿತ ಜೈನ ಬಸದಿಗಳು, ಬೌದ್ಧ ವಿಹಾರಗಳು ಮತ್ತು ಸಿಖ್ ಗುರುದ್ವಾರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರುಗಳು, ಧಮ್ಮಚಾರಿಗಳು ಮತ್ತು ಗ್ರಂಥಿಗಳಿಗೆ ಮಾತ್ರ ಗೌರವಧನ ನೀಡಲಾಗುವುದು. ತಲಾ 1 ಜೈನ ಬಸದಿಗಳು, ಬೌದ್ಧ ವಿಹಾರಗಳು ಮತ್ತು ಸಿಖ್ ಗುರುದ್ವಾರಗಳಲ್ಲಿ ಒಬ್ಬ ಪ್ರಧಾನ ಮತ್ತು ಒಬ್ಬ ಸಹಾಯಕರಿಗೆ ಮಾತ್ರ ಗೌರವಧನವನ್ನು ನೀಡಲಾಗುವುದು. ಅರ್ಚಕರುಗಳು, ಧಮ್ಮಚಾರಿಗಳು ಮತ್ತು ಗ್ರಂಥಿಗಳು ಅವರ ಹುದ್ದೆಗೆ ಸಂಬಂಧಪಟ್ಟ ಧಾರ್ಮಿಕ ವಿದ್ಯಾರ್ಹತೆಯನ್ನು ಹೊಂದಿರಬೇಕು. ಸಂಬಂಧಿತ ಬಸದಿ, ವಿಹಾರ, ಗುರುದ್ವಾರಗಳು/ ಸಂಸ್ಥೆಯವರು ಪ್ರಧಾನ ಮತ್ತು ಸಹಾಯಕರುಗಳ ಮಾಹೆಯಾನ ಕರ್ತವ್ಯದ ಹಾಜರಾತಿ ದೃಢೀಕರಣ ಪತ್ರವನ್ನು ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿ, 1ನೇ ಮಹಡಿ, ಸತ್ಯಶ್ರೀ ಆರ್ಕೆಡ್, 5ನೇ ಪ್ಯಾರಲಾಲ್ ರಸ್ತೆ, ದುರ್ಗಿಗುಡಿ, ಶಿವಮೊಗ್ಗ, ದೂ.ಸಂ.:08182-220206 ಹಾಗೂ ಜಿಲ್ಲಾ ಮಾಹಿತಿ ಕೇಂದ್ರ -7676888388, ತಾಲೂಕು ಮಾಹಿತಿ ಕೇಂದ್ರಗಳಾದ ಭದ್ರಾವತಿ-9538853680, ತೀರ್ಥಹಳ್ಳಿ-8861982835, ಶಿಕಾರಿಪುರ-7829136724, ಸಾಗರ-7338222907, ಸೊರಬ-9513815513, ಹೊಸನಗರ-9008447029 ಗಳನ್ನು ಸಂಪರ್ಕಿಸಬಹುದೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

