ಫೆಬ್ರವರಿ ಬಂತೆಂದರೆ ಸಾಕು ಗಾಳಿಯಲ್ಲಿ ಪ್ರೀತಿಯ ಪರಿಮಳ ಪ್ರೀತಿಸುವ ಮನಸ್ಸುಗಳು ತಮ್ಮ ಸಂಗಾತಿಗೆ ಐ ಲವ್ ಯೂ ಹೇಳಲು ಕಾತರದಿಂದ ಕಾಯುವ ದಿನವೇ ಈ ವ್ಯಾಲೆಂಟೈನ್ಸ್ ಡೇ (Valentine’s Day). ಆದರೆ ಇಂದು ನಾವು ಸಂಭ್ರಮದಿಂದ ಆಚರಿಸುವ ಈ ಕೆಂಪು ಗುಲಾಬಿಗಳ ದಿನದ ಹಿಂದೆ ಒಬ್ಬ ಸಂತರ ತ್ಯಾಗದ ಕಥೆಯಿದೆ ಎಂಬುದು ನಿಮಗೆ ಗೊತ್ತೇ?
ರಾಜನ ಆದೇಶಕ್ಕೆ ಸೆಡ್ಡು ಹೊಡೆದಿದ್ದ ವ್ಯಾಲೆಂಟೈನ್
ಕ್ರಿ.ಶ. 4ನೇ ಶತಮಾನದಲ್ಲಿ ರೋಮ್ ಸಾಮ್ರಾಜ್ಯವನ್ನು ಆಳುತ್ತಿದ್ದ ಚಕ್ರವರ್ತಿ ಕ್ಲಾಡಿಯಸ್ ಮದುವೆಯಾದರೆ ಸೈನಿಕರು ಯುದ್ಧದಲ್ಲಿ ಸಮರ್ಥರಾಗಿರುವುದಿಲ್ಲ ಎಂದು ವಿಚಿತ್ರ ಆದೇಶ ಹೊರಡಿಸಿದ್ದ. ಸೈನಿಕರು ಮದುವೆಯಾಗುವುದನ್ನು ನಿಷೇಧಿಸಿದ್ದ. ಆದರೆ ಅಲ್ಲಿನ ಪಾದ್ರಿ ಸೇಂಟ್ ವ್ಯಾಲೆಂಟೈನ್ ಈ ಅನ್ಯಾಯದ ವಿರುದ್ಧ ಸಿಡಿದೆದ್ದರು. ಪ್ರೀತಿಸುವ ಜೋಡಿಗಳಿಗೆ ರಹಸ್ಯವಾಗಿ ಮದುವೆ ಮಾಡಿಸಲು ಶುರು ಮಾಡಿದರು
ನಿಮ್ಮ ವ್ಯಾಲೆಂಟೈನ್ನಿಂದ ಮರಣದಂಡನೆಗೂ ಮುನ್ನ ಬಂದ ಪತ್ರ
ವಿಚಾರ ತಿಳಿದ ರಾಜ ವ್ಯಾಲೆಂಟೈನ್ ಅವರನ್ನು ಜೈಲಿಗಟ್ಟಿದನು. ಜೈಲಿನಲ್ಲಿದ್ದಾಗ ಅವರು ಜೈಲರ್ನ ಮಗಳನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಫೆಬ್ರವರಿ 14ರಂದು ಅವರನ್ನು ಗಲ್ಲಿಗೇರಿಸುವ ಮುನ್ನ ತಮ್ಮ ಪ್ರೇಯಸಿಗೆ From Your Valentine ಎಂದು ಸಹಿ ಮಾಡಿ ಪ್ರೇಮ ಪತ್ರ ಬರೆದಿದ್ದರು. ಆ ಸವಿನೆನಪಿಗಾಗಿ ಇಂದಿಗೂ ಪ್ರೇಮಿಗಳು ಫೆಬ್ರವರಿ 14ನ್ನು ಪ್ರೀತಿಯ ದಿನವನ್ನಾಗಿ ಆಚರಿಸುತ್ತಾರೆ
ಫೆಬ್ರವರಿ 14ರಂದೇ ಏಕೆ?
ಪ್ರಾರಂಭದಲ್ಲಿ ಇದು ಕೇವಲ ಒಂದು ಧಾರ್ಮಿಕ ಹಬ್ಬವಾಗಿತ್ತು. ಆದರೆ 14 ಮತ್ತು 15ನೇ ಶತಮಾನದ ಯುರೋಪಿಯನ್ ಸಾಹಿತ್ಯದಲ್ಲಿ ಕವಿಗಳು ಫೆಬ್ರವರಿ ಮಧ್ಯಭಾಗವನ್ನು ಹಕ್ಕಿಗಳ ಮಿಲನದ ಅವಧಿ (Mating Season of Birds) ಎಂದು ಕರೆದರು. ಇದು ವಸಂತಕಾಲದಲ್ಲಿ ಪ್ರೀತಿ ಚಿಗುರುವ ಸಮಯ ಎಂಬ ಕಲ್ಪನೆಯನ್ನು ಮೂಡಿಸಿತು. ಕ್ರಮೇಣ ಸಾಹಿತ್ಯ ಮತ್ತು ಕವಿತೆಗಳ ಮೂಲಕ ಇದು ಪ್ರೇಮಿಗಳ ದಿನವಾಗಿ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆಯಿತು.
ಕ್ಯೂಪಿಡ್ ಬಾಣದ ರಹಸ್ಯವೇನು?
ಪ್ರೇಮಿಗಳ ದಿನದಂದು ನೀವು ಬಿಲ್ಲು-ಬಾಣ ಹಿಡಿದ ರೆಕ್ಕೆಯಿರುವ ಪುಟ್ಟ ಮಗುವಿನ ಚಿತ್ರ ನೋಡಿರಬಹುದು. ರೋಮ್ ಪುರಾಣದ ಪ್ರಕಾರ ಈತ ಸೌಂದರ್ಯದ ದೇವತೆ ಶುಕ್ರನ ಮಗ ಕ್ಯೂಪಿಡ್. ಈತ ತನ್ನ ಬಿಲ್ಲು-ಬಾಣದಿಂದ ಹೃದಯಕ್ಕೆ ಹೊಡೆದರೆ ಸಾಕು ಅಲ್ಲಿ ಪ್ರೀತಿಯ ಮಂತ್ರ ಜಪ ಶುರುವಾಗುತ್ತದೆ ಎಂಬುದು ನಂಬಿಕೆ
ಈಗಿನ ವ್ಯಾಲೆಂಟೈನ್ಸ್ ಡೇ ಹೇಗಿರುತ್ತೆ?
ಇಂದು ಈ ದಿನ ಜಾಗತಿಕ ಹಬ್ಬವಾಗಿ ಬದಲಾಗಿದೆ.
ಗಿಫ್ಟ್ ಮತ್ತು ಕಾರ್ಡ್: ಚಾಕೊಲೇಟ್ ಕೆಂಪು ಗುಲಾಬಿ ಮತ್ತು ಪ್ರೇಮ ಸಂದೇಶಗಳ ವಿನಿಮಯ.
ಪ್ರೇಮ ನಿವೇದನೆ: ರಹಸ್ಯವಾಗಿ ಪ್ರೀತಿಸುವವರು ಕೂಡ ಇಂದು ತಮ್ಮ ಮನದ ಮಾತನ್ನು ತಿಳಿಸಲು ಮುಂದಾಗುತ್ತಾರೆ.
ಎಲ್ಲರಿಗೂ ಪ್ರೀತಿ: ಕೇವಲ ಬಾಳ ಸಂಗಾತಿಗಲ್ಲದೆ, ಪೋಷಕರು ಮತ್ತು ಸ್ನೇಹಿತರಿಗೂ ಪ್ರೀತಿ ವ್ಯಕ್ತಪಡಿಸುವ ದಿನವಾಗಿ ಇದು ಬದಲಾಗಿದೆ

