HomeLatest Newsಮಲೆ ಮಹದೇಶ್ವರ ಬೆಟ್ಟಕ್ಕೆ ಶಿವರಾತ್ರಿ ಜಾತ್ರೆಗೆ ಬರುವ ಭಕ್ತರಿಗೆ ಅರಣ್ಯ ಇಲಾಖೆ ಹೈ ಅಲರ್ಟ್ ಘೋಷಣೆ:...

ಮಲೆ ಮಹದೇಶ್ವರ ಬೆಟ್ಟಕ್ಕೆ ಶಿವರಾತ್ರಿ ಜಾತ್ರೆಗೆ ಬರುವ ಭಕ್ತರಿಗೆ ಅರಣ್ಯ ಇಲಾಖೆ ಹೈ ಅಲರ್ಟ್ ಘೋಷಣೆ: ಮೂತ್ರ ವಿಸರ್ಜನೆ, ಬಹಿರ್ದೆಸೆಗೂ ಕಾಡಿನ ಒಳಗೆ ಹೋಗುವಂತಿಲ್ಲ

ಚಾಮರಾಜನಗರ: ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಸಾಗುತ್ತಿದ್ದ ಭಕ್ತರ ಮೇಲೆ ಚಿರತೆ ದಾಳಿ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಅರಣ್ಯ ಇಲಾಖೆ ಶಿವರಾತ್ರಿ ಜಾತ್ರೆಗೆ ಬರುವ ಭಕ್ತರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆಗೆ ಬರುವ ಭಕ್ತರ ಸುರಕ್ಷತೆ ದೃಷ್ಟಿಂದ ಜಿಲ್ಲಾಡಳಿತ ಹೈಅಲರ್ಟ್ ಘೋಷಿಸಿದೆ. ಪಾದಯಾತ್ರೆ ಮೂಲಕ ಬರುವ ಭಕ್ತರು ಗುಂಪುಗೂಡಿ ಪ್ರಯಾಣಿಸಲು, ಕಾಡಿನ ದಾರಿ ಬಳಸದಂತೆ ಹಾಗೂ ಭಕ್ತರು ಮೂತ್ರ ವಿಸರ್ಜನೆ, ಬಹಿರ್ದೆಸೆಗೆ ಕಾಡಿನ ಒಳಗೆ ಹೋಗದಂತೆ ಸೂಚನೆ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಲೆ ಮಹದೇಶ್ವರಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಭಕ್ತನೊಬ್ಬ ಇತ್ತೀಚೆಗೆ ಚಿರತೆ ದಾಳಿಗೆ ಬಲಿಯಾಗಿರುವ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಹೈಅಲರ್ಟ್ ಘೋಷಿಸಿದೆ.

ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ ಪಾದಯಾತ್ರಿಗಳ ಸುರಕ್ಷತೆಗೆ ತುರ್ತು ಸಭೆಗಳನ್ನು ನಡೆಸಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡುವ ಭಕ್ತರ ಮೇಲೆ ಡ್ರೋನ್ ಮೂಲಕ ನಿಗಾ ವಹಿಸಲಾಗುತ್ತಿದೆ.

ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ಮಾರ್ಗ ಮಧ್ಯೆ ಕಟ್ತೆಚ್ಚರ ಘೋಷಿಸಲಾಗಿದೆ. ಪ್ರತಿ ಕಿಲೋಮೀಟರ್‌ಗೂ ಒಂದೊಂದು ತಂಡವನ್ನು ನಿಯೋಜಿಸಲಾಗಿದೆ. ಒಟ್ಟು 8 ತಂಡಗಳನ್ನು ರಚಿಸಲಾಗಿದ್ದು, ಪ್ರತಿಯೊಂದು ತಂಡಕ್ಕೂ ಬಂದೂಕು, ವಾಕಿಟಾಕಿ, ಮಚ್ಚು, ಲಾಠಿ ಹಾಗೂ ಪಟಾಕಿಗಳನ್ನು ವಿತರಿಸಲಾಗಿದೆ. ಡಿಆರ್‌ಎಫ್‌ಒ, ಪೊಲೀಸ್ ಸಿಬ್ಬಂದಿ, ವಾಚರ್ ಹಾಗೂ ಎಪಿಸಿ ಕ್ಯಾಂಪ್ ಸಿಬ್ಬಂದಿ ಸೇರಿ ಭದ್ರತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಐದು ಸಿಬ್ಬಂದಿ ಈ ಕಾರ್ಯಾಚರಣೆಗೆ ನೇತೃತ್ವ ವಹಿಸಿದ್ದಾರೆ.

ಪಾದಯಾತ್ರೆ ಮಾಡುವ ಭಕ್ತರು ಗುಂಪು ಗುಂಪಾಗಿ ಮಾತ್ರ ಬೆಟ್ಟ ಏರಬೇಕು. ಕಾಡಿನ ಒಳಗೆ ಒಬ್ಬರೇ ಹೋಗುವಂತಿಲ್ಲ. ಮೂತ್ರ ವಿಸರ್ಜನೆ ಅಥವಾ ಬಹಿರ್ದೆಸೆಗೆ ಕಾಡಿನೊಳಗೆ ಹೋಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

ಫೆಬ್ರವರಿ 14ರಿಂದ 18ರವರೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು, ಯಾವುದೇ ಅನಾಹುತ ಸಂಭವಿಸದಂತೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಮನ್ವಯದಲ್ಲಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular