HomeKarnatakaಶರಾವತಿ ಸಂತ್ರಸ್ತರಿಗೆ ಶಾಶ್ವತ ಪರಿಹಾರ: ಅರಣ್ಯ ಸಂರಕ್ಷಣೆ, ಡಿನೋಟಿಫಿಕೇಷನ್ ಬಗ್ಗೆ ಸರ್ಕಾರ ಮಹತ್ವದ ನಿರ್ಧಾರ

ಶರಾವತಿ ಸಂತ್ರಸ್ತರಿಗೆ ಶಾಶ್ವತ ಪರಿಹಾರ: ಅರಣ್ಯ ಸಂರಕ್ಷಣೆ, ಡಿನೋಟಿಫಿಕೇಷನ್ ಬಗ್ಗೆ ಸರ್ಕಾರ ಮಹತ್ವದ ನಿರ್ಧಾರ

ಶಿವಮೊಗ್ಗ: ವನ್ಯಜೀವಿ ಸಂರಕ್ಷಣೆ, ಅರಣ್ಯ ಸಂಪತ್ತು ರಕ್ಷಣೆ ಮತ್ತು ಜನರ ಅಭಿವೃದ್ದಿಯ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದು, ಶೆಟ್ಟಿಹಳ್ಳಿ ಅಭಯಾರಣ್ಯ ಡಿನೋಟಿಫಿಕೇಷನ್ ಮತ್ತು ಶರಾವತಿ ಸಂತ್ರಸ್ತರಿಗೆ ಪರಿಹಾರ ಕುರಿತಾದ ತೀರ್ಮಾನಗಳು ಅಂತಿಮ ಘಟ್ಟ ತಲುಪಿವೆ ಎಂದು ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ತಿಳಿಸಿದರು.

ಬುಧವಾರ ತ್ಯಾವರೆಕೊಪ್ಪದ ಸಿಂಹಧಾಮದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟಿಹಳ್ಳಿ ವನ್ಯಜೀವಿಧಾಮ ಡಿ-ನೋಟಿಫಿಕೇಷನ್ ಪ್ರಸ್ತಾವನೆಯು ಸುಮಾರು 2016 ರಿಂದ ಬಾಕಿ ಇದ್ದು, ಈಗ ಅಂತಿಮ ಘಟ್ಟಕ್ಕೆ ಬಂದಿದೆ. ಹಿಂದೆ 1974 ರಲ್ಲಿ ನೋಟಿಫಿಕೇಷನ್ ಮಾಡಿದ ಸಂದರ್ಭದಲ್ಲಿ 395 ಚ.ಕಿ.ಮೀ. ಪ್ರದೇಶ ಸೇರ್ಪಡೆ ಮಾಡಿದ್ದರು. ಆದರೆ ಅದರಲ್ಲಿ ಬಸ್ ಸ್ಟ್ಯಾಂಡ್, ಎಫ್‌ಸಿಐ ಗೋದಾಮು, ಎಪಿಎಂಸಿ, ಸರ್ಕಾರಿ ಕಚೇರಿಗಳು, ಜನವಸತಿ ಪ್ರದೇಶ ಸೇರ್ಪಡೆಗೊಂಡಿದ್ದು, ಇದೆಲ್ಲವನ್ನೂ ಪರಿಶೀಲನೆ ಮಾಡಿ, ಅಧಿಕಾರಿಗಳು ಸಮೀಕ್ಷೆಗಳನ್ನು ಮಾಡಿದ್ದಾರೆ. ಈ ಕುರಿತು ಹಲವಾರು ಸಭೆಗಳನ್ನು ಮಾಡಲಾಗಿದೆ. ಅರಣ್ಯ ಸಂಪತ್ತು ಸಂರಕ್ಷಣೆ ಮಾಡಬೇಕು. ಜೀವನ ಮತ್ತು ಜೀವನೋಪಾಯ ಎರಡೂ ಬೇಕಾಗಿದ್ದು, ಆಡಳಿತಾತ್ಮಕವಾಗಿ, ಭಾವನಾತ್ಮಕವಾಗಿ ತೀರ್ಮಾನ ತೆಗೆದುಕೊಳ್ಳಲು ಖುದ್ದಾಗಿ ಪರಿಶೀಲಿಸಲು ಬಂದಿದ್ದೇನೆ. ನಂತರ ಸಭೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಶರಾವತಿ ಸಂತ್ರಸ್ತರ ಸಮಸ್ಯೆಗಳಿಗೆ ಪರಿಹಾರೋಪಾಯ ಅಂತಿಮ ಘಟ್ಟ ತಲುಪಿದೆ. ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಲಾಗಿದ್ದು, ನ್ಯಾಯಾಲಯವು, ಕೇಂದ್ರ ಸರ್ಕಾರ ಮತ್ತು ಅರಣ್ಯ ಇಲಾಖೆ ಸೇರಿ ತೀರ್ಮಾನ ಮಾಡಲು ಸೂಚಿಸಿದೆ. ಹಾಗೂ ಕಂದಾಯ ಇಲಾಖೆಯು ಅರ್ಹ ಫಲಾನುಭವಿಗಳನ್ನು ಗುರುತಿಸುತ್ತಿದ್ದು, ಅರಣ್ಯ ಇಲಾಖೆ ನಿರಂತರವಾಗಿ ಕಂದಾಯ ಇಲಾಖೆಯ ಸಂಪರ್ಕದಲ್ಲಿದೆ. ಕಂದಾಯ ಇಲಾಖೆ ಅಂತಿಮಗೊಳಿಸಿದ ಪಟ್ಟಿ ಬಂದ ತಕ್ಷಣ ಸುಮಾರು 60 ವರ್ಷಗಳ ನಂತರ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಶಾಶ್ವತವಾಗಿ ಪರಿಹಾರ ನೀಡುತ್ತಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವನ್ಯಜೀವಿ ಸಂರಕ್ಷಣೆ ಆಗಬೇಕು, ಅರಣ್ಯ ಸಂಪತ್ತು ಉಳಿಯಬೇಕು ಹಾಗೂ ಅಭಿವೃದ್ದಿಯೂ ಆಗಬೇಕು ಈ ನಿಟ್ಟಿನಲ್ಲಿ ಸರ್ಕಾರ ತೀರ್ಮಾನಗಳನ್ನು ತೆಗೆದುಕೊಳ್ಳತ್ತಿದೆ. ಮಾನವ-ವನ್ಯಜೀವಿ ಸಂಘರ್ಷವನ್ನು ತಡೆಯಲು ಸರ್ಕಾರ ಹಲವಾರು ಕ್ರಮ ಕೈಗೊಂಡಿದೆ. ಆನೆ ಕಾರ್ಯಪೆಡೆ, ಚಿರತೆ ಕಾರ್ಯಪಡೆ, ಹೆಚ್ಚುವರಿ ಸಿಬ್ಬಂದಿ ನೇಮಕ, ಸಲಕರಣೆಗಳು, ಕ್ಯಾಂಪ್‌ಗಳು, ರೈಲ್ವೇ ಬ್ಯಾರಿಕೇಡ್, ಸೋಲಾರ್ ಫೆನ್ಸಿಂಗ್ ರಚನೆ, ಕಮಾಂಡ್ ಸೆಂಟರ್ ಗಳು, ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್‌ಗಳು ಜೊತೆಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಈ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಒಂದೇ ಒಂದು ಜೀವ ಕಳೆದುಕೊಳ್ಳದ ರೀತಿ ಮಾನವ ಪ್ರಾಣ ಮತ್ತು ವನ್ಯಜೀವಿಗಳು ಉಳಿಯಬೇಕೆಂಬ ದೃಷ್ಟಿಯಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾ ಪೂರ‍್ಯಾನಾಯ್ಕ, ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular