ಬೆಂಗಳೂರು: ಪತ್ನಿಯ ಮೊಬೈಲ್ ನಲ್ಲಿ ರಹಸ್ಯವಾಗಿ ಸಾಫ್ಟ್ವೇರ್ ಇನ್ಸ್ಟಾಲ್ ಮಾಡಿ ಆಕೆಯ ಪ್ರತಿ ಚಲನವಲನ ತಿಳಿದುಕೊಳ್ಳುತ್ತಿದ್ದ ಪತಿಯ ವಿರುದ್ಧ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪುಟ್ಟೇನಹಳ್ಳಿ ಬಿಜಿ ರಸ್ತೆಯ 28 ವರ್ಷದ ವೈದ್ಯೆ ನೀಡಿದ ದೂರಿನ ಆಧಾರದ ಮೇಲೆ ಅವರ ಪತಿ ಅಮಲ್ ವಿ. ನಾಯರ್ ಎಂಬುವರ ವಿರುದ್ಧ ಕೇಸ್ ದಾಖಲಾಗಿದೆ. 2025 ಆಗಸ್ಟ್ 1ರಿಂದ ದಂಪತಿ ಬೇರೆಯಾಗಿ ವಾಸವಾಗಿದ್ದಾರೆ. ಅವರಿಗೆ ಒಂದು ಮಗು ಇದ್ದು, ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ವಾರಕ್ಕೊಮ್ಮೆ ಮಗು ನೋಡಲು ನ್ಯಾಯಾಲಯ ಅಮಲ್ ಗೆ ಅವಕಾಶ ನೀಡಿದೆ.
ಈ ನಡುವೆ ಮಗು ನೋಡಲು ಬರುವ ವೇಳೆ ಪತ್ನಿಗೆ ಗೊತ್ತಾಗದಂತೆ ಆಕೆಯ ಮೊಬೈಲ್ ನಲ್ಲಿ ಮಾಲ್ವೇರ್ ಸಾಫ್ಟ್ವೇರ್ ಅನ್ನು ರಹಸ್ಯವಾಗಿ ಇನ್ಸ್ಟಾಲ್ ಮಾಡಿದ್ದ. ಆಕೆ ಎಲ್ಲಿಗೆ ಹೋಗುತ್ತಾಳೆ, ಯಾರ ಜೊತೆ ಮಾತನಾಡುತ್ತಾಳೆ ಎಂಬ ಮಾಹಿತಿ ಪಡೆದುಕೊಳ್ಳುತ್ತಿದ್ದ.
2025ರ ನವೆಂಬರ್ 22ರಂದು ವೈದ್ಯೆ ಮೊಬೈಲ್ ಲ್ಲಿ ಅಪ್ಡೇಟ್ ಸರ್ವಿಸ್ ಎಂಬ ಮಾಲ್ವೇರ್ ವೈಫೈ ವಿಸ್ತರಣೆಗೆ ಅನುಮತಿ ಕೇಳಿದೆ. ಬಳಿಕ ಅನುಮಾನ ಬಂದು ಪರಿಶೀಲಿಸಿದಾಗ ತಮ್ಮ ಪತಿಯೇ ಕೃತ್ಯ ಎಸಗಿರುವುದು ತಿಳಿದು ಬಂದಿದೆ. ನಂತರ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

